ಬ್ಯಾಟಿಂಗ್ ವೈಫಲ್ಯ; ಕುಸಿದ ಮಯಂಕ್ ಪಡೆ ಮೊಹಾಲಿ: ಕೇರಳದ ವೈಶಾಖ ಚಂದ್ರನ್ ಅವರ ಪರಿಣಾಮಕಾರಿ ದಾಳಿಯ ಮುಂದೆ ಕರ್ನಾಟಕದ ಬ್ಯಾಟಿಂಗ್ ಪಡೆಯು ಬುಧವಾರ ಇಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕುಸಿಯಿತು. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಸಿ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕವು 53 ರನ್‌ಗಳಿಂದ ಸೋತಿತು. ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಮಯಂಕ್ ಅಗರವಾಲ್ ಬಳಗವು ಮಹಾರಾಷ್ಟ್ರದ ವಿರುದ್ಧ ಭಾರೀ ಅಂತರದ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ಶತಕ ಬಾರಿಸಿದ್ದ ದೇವದತ್ತ ಪಡಿಕ್ಕಲ್, ನಾಯಕ ಮಯಂಕ್, ಮನೀಷ್ ಪಾಂಡೆ ಹಾಗೂ ನವಪ್ರತಿಭೆ ಎಲ್. ಆರ್. ಚೇತನ್ ವಿಕೆಟ್‌ಗಳನ್ನು ಆಫ್‌ಸ್ಪಿನ್ನರ್ ವೈಶಾಖ ಚಂದ್ರನ್ ಕಳಿಸಿದರು.ಇದರಿಂದಾಗಿ 179 ರನ್‌ಗಳ ಗುರಿ ಬೆನ್ನಟ್ಟಿದ್ದ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 126 ರನ್‌ ಗಳಿಸಲಷ್ಟೇ ಶಕ್ತವಾಯಿತು. ಲವನೀತ್ ಸಿಸೊಡಿಯಾ (36; 28ಎ) ಹಾಗೂ ಅಭಿನವ್ ಮನೋಹರ್ (ಔಟಾಗದೆ 46; 27ಎ, 4X1, 6X4) ಅವರಿಬ್ಬರೇ ಕರ್ನಾಟಕದ ಪರ ಎರಡಂಕಿ ತಲುಪಿದ ಬ್ಯಾಟರ್‌ಗಳು. ಅಜರ್ ಬ್ಯಾಟಿಂಗ್: ಅಬ್ಬರದ ಬ್ಯಾಟರ್ ಮೊಹಮ್ಮದ್ ಅಜರುದ್ದೀನ್ (ಔಟಾಗದೆ 95; 47ಎ, 4X8, 6X6) ಕರ್ನಾಟಕ ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. ಆರಂಭಿಕ ಬ್ಯಾಟರ್‌ಗಳಾದ ವಿಷ್ಣು ವಿನೋದ್ (34 ರನ್) ಹಾಗೂ ಕುನ್ನುಮ್ಮಾಳ್ (16 ರನ್) ಮೊದಲ ವಿಕೆಟ್‌ಗೆ 45 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಇವರಿಬ್ಬರ ವಿಕೆಟ್‌ಗಳನ್ನೂ ಎಡಗೈ ಸ್ಪಿನ್ನರ್ ಜೆ.ಸುಚಿತ್ ಗಳಿಸಿದರು. ನಾಯಕ ಸಚಿನ್ ಬೇಬಿ ಹಾಗೂ ಕೃಷ್ಣ ಪ್ರಸಾದ್ ಅವರು ಹೆಚ್ಚು ಹೊತ್ತು ಆಡದಂತೆ ವೈಶಾಖ್ ವಿಜಯಕುಮಾರ್ ತಡೆಯೊಡ್ಡಿದರು. ಆದರೆ ಇದೆಲ್ಲವುಗಳ ನಡುವೆ ಬೀಸಾಟವಾಡುತ್ತಲೇ ಇದ್ದ ಅಜರುದ್ದೀನ್ ರನ್‌ಗಳನ್ನು ಸೂರೆ ಮಾಡಿದರು. ಅವರ ಪುಲ್, ಫ್ಲಿಕ್ ಹಾಗೂ ಡ್ರೈವ್‌ಗಳ ಚೆಂದದ ಆಟ ಮನಸೆಳೆಯಿತು. ಸಂಕ್ಷಿಪ್ತ ಸ್ಕೋರು: ಕೇರಳ: 20 ಓವರ್‌ಗಳಲ್ಲಿ‌ 4ಕ್ಕೆ179 (ವಿಷ್ಣು ವಿನೋದ್ 34, ಅಜರುದ್ದೀನ್ ಔಟಾಗದೆ 95, ವಿಜಯಕುಮಾರ್ ವೈಶಾಖ 39ಕ್ಕೆ2, ಜೆ. ಸುಚಿತ್ 25ಕ್ಕೆ2) ಕರ್ನಾಟಕ: 20 ಓವರ್‌ಗಳಲ್ಲಿ 9ಕ್ಕೆ126 (ಲವನೀತ್ ಸಿಸೊಡಿಯಾ 36, ಅಭಿನವ್ ಮನೋಹರ್ 46, ವೈಶಾಖ ಚಂದ್ರನ್ 11ಕ್ಕೆ4, ಸುದೇಷ್ಣ್ ಮಿಥುನ್ 15ಕ್ಕೆ2) ಫಲಿತಾಂಶ: ಕೇರಳ ತಂಡಕ್ಕೆ 53 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.