ಭಾರತಕ್ಕೆ ಸುಲಭ ಜಯದ ಕನಸು ಸಿಲೆಟ್, ಬಾಂಗ್ಲಾದೇಶ (ಪಿಟಿಐ): ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ಥಾಯ್ಲೆಂಡ್ ತಂಡದ ವಿರುದ್ಧ ಬಲಿಷ್ಟ ಭಾರತ ತಂಡವು ಸುಲಭ ಜಯದ ಕನಸು ಕಾಣುತ್ತಿದೆ. ಗುರುವಾರ ಇಲ್ಲಿ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕ್ರಿಕೆಟ್‌ ಅಂಗಳದಲ್ಲಿ ಥಾಯ್ಲೆಂಡ್ ತಂಡದ ಅನುಭವ ಹೆಚ್ಚು ಇಲ್ಲ. ಲೀಗ್ ಹಂತದ ಪಂದ್ಯದಲ್ಲಿ ಭಾರತದ ಮುಂದೆ ಥಾಯ್ಲೆಂಡ್ ಸುಲಭವಾಗಿ ಶರಣಾಗಿತ್ತು. ಆದರೆ, ಇನ್ನೊಂದು ಉತ್ತಮ ತಂಡವಾದ ಪಾಕಿಸ್ತಾನದ ವಿರುದ್ಧ ಅಮೋಘ ಜಯ ಸಾಧಿಸಿತ್ತು. ಅಲ್ಲದೇ ಮಲೇಷ್ಯಾ ಹಾಗೂ ಯುಎಇ ವಿರುದ್ಧವೂ ಜಯಿಸಿತ್ತು. ನೆರುಮಾಲ್ ಚೈವೈ ನಾಯಕತ್ವದ ತಂಡವು ಒಟ್ಟು ಆರು ಅಂಕ ಪಡೆದು ನಾಲ್ಕರ ಘಟ್ಟ ಪ್ರವೇಶಿಸಿದೆ. ಮಂಗಳವಾರ ನಡೆಯಬೇಕಿದ್ದ ಆತಿಥೇಯ ಬಾಂಗ್ಲಾದೇಶ ಹಾಗೂ ಯುಎಇ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರಿಂದ ಥಾಯ್ಲೆಂಡ್‌ಗೆ ಅದೃಷ್ಟ ಒಲಿಯಿತು. ಒಂದೊಮ್ಮೆ ಆ ಪಂದ್ಯ ನಡೆದಿದ್ದರೆ ಬಾಂಗ್ಲಾದೇಶಕ್ಕೆ ಗೆಲುವು ಹಾಗೂ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇತ್ತು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವ ಕೌರ್ ಬಳಗದ ಆರಂಭಿಕ ಬ್ಯಾಟಿಂಗ್ ಚಿಂತೆ ಪರಿಹಾರವಾದಂತಾಗಿದೆ. ಶಫಾಲಿ ಹಾಗೂ ಸ್ಮೃತಿ ಮಂದಾನ ಲಯಕ್ಕೆ ಮರಳಿದ್ದಾರೆ. ಬೌಲರ್‌ಗಳಾದ ದೀಪ್ತಿ, ರಾಜೇಶ್ವರಿ ಮತ್ತು ಸ್ನೇಹಾ ಕೂಡ ಅಮೋಘವಾಗಿ ಆಡುತ್ತಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಪಾಕ್ ತಂಡವು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ಲಂಕಾ ತಂಡಕ್ಕಿಂತ ಪಾಕ್ ಬಳಗವು ಸಮತೋಲನವಾಗಿದೆ. ಆದ್ದರಿಂದ ಫೈನಲ್‌ನಲ್ಲಿ ಭಾರತ ಹಾಗೂ ಪಾಕ್ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ. ಪಂದ್ಯ ಆರಂಭ: ಬೆಳಿಗ್ಗೆ 8.30ರಿಂದ ನೇರಪ್ರಸಾರ:ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಆ್ಯಪ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.