| : ರೋಹಿತ್ ಪಡೆಗೆ ಬಾಬರ್ ಬಳಗದ ಸವಾಲು ಕೊಲಂಬೊ: ಕ್ರಿಕೆಟ್ ರಂಗದ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಎಂಟು ದಿನಗಳ ನಂತರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಭಾನುವಾರ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಈ ಎರಡೂ ತಂಡಗಳು ಸೆಣಸಲಿವೆ. ಹೋದವಾರ ಗುಂಪು ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಮತ್ತು ಬಾಬರ್‌ ಆಜಂ ನಾಯಕತ್ವದ ತಂಡಗಳು ಆಡಿದ್ದವು. ಆದರೆ, ಮಳೆ ಬಂದ ಕಾರಣ ಪಂದ್ಯ ಪೂರ್ಣಗೊಳ್ಳದೇ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 266 ರನ್‌ ಮೊತ್ತ ಗಳಿಸಲು ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಚೆಂದದ ಬ್ಯಾಟಿಂಗ್ ನೆರವಾಗಿತ್ತು. ಭಾರತ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ವೈಫಲ್ಯ ಅನುಭವಿಸಿದ್ದರು. ಪಾಕ್ ಬೌಲರ್‌ಗಳಾದ ಶಾಹೀನ್ ಆಫ್ರಿದಿ, ನಸೀಂ ಷಾ ಹಾಗೂ ಹ್ಯಾರಿಸ್ ರವೂಫ್ ಅವರ ದಾಳಿಗೆ ಕುಸಿದಿದ್ದರು. ಗಾಯಗೊಂಡು ದೀರ್ಘ ಕಾಲದಿಂದ ಹೊರಗುಳಿದಿದ್ದ ಕೆ.ಎಲ್. ರಾಹುಲ್ ತಂಡಕ್ಕೆ ಮರಳಿದ್ದಾರೆ. ಅವರಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಲಭಿಸುವುದು ಬಹುತೇಕ ಖಚಿತ. ಅವರಿಗೆ ವಿಕೆಟ್‌ಕೀಪಿಂಗ್ ಹೊಣೆ ನೀಡುವ ನಿರೀಕ್ಷೆಯೂ ಇದೆ. ಆದರೆ ಇಶಾನ್ ಕಿಶನ್ ಕಳೆದ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದ್ದರಿಂದ ಇವರಿಬ್ಬರಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ ಎಂಬ ಕುತೂಹಲ ಗರಿಗೆದರಿದೆ. ಆದರೆ ಭಾರತದ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅವರಿಗೆ ಆ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಲಭಿಸಿರಲಿಲ್ಲ. ನೇಪಾಳ ತಂಡದ ಎದುರು ಆಡಿದ್ದರು. ಆದರೆ ಆ ಪಂದ್ಯದಲ್ಲಿ ಬೂಮ್ರಾ ಆಡಿರಲಿಲ್ಲ. ಶಮಿ, ಸಿರಾಜ್, ಶಾರ್ದೂಲ್ ಹಾಗೂ ಪಾಂಡ್ಯ ಅವರ ಬೌಲಿಂಗ್‌ಗೆ ನೇಪಾಳದ ಉದಯೋನ್ಮುಖ ಆಟಗಾರರು ದಿಟ್ಟ ಉತ್ತರ ನೀಡಿ ಗಮನ ಸೆಳೆದರು. ಈ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಡಿಎಲ್‌ಎಸ್‌ ನಿಯಮದ ಅನ್ವಯ ಭಾರತ ಜಯಿಸಿತು. ಇದೀಗ ನಾಲ್ಕರ ಘಟ್ಟದಲ್ಲಿ ಭಾರತ ತಂಡವು ತನ್ನ ಪಾಲಿನ ಮೂರು ಪಂದ್ಯಗಳ ಪೈಕಿ ಮೊದಲನೆಯದನ್ನು ಪಾಕ್ ಎದುರು ಆಡಲಿದೆ. ಆದರೆ ಬಾಬರ್‌ ಬಳಗಕ್ಕೆ ಇದು ಎರಡನೇ ಪಂದ್ಯವಾಗಿದೆ. ಮೊದಲನೇ ಪಂದ್ಯದಲ್ಲಿ ಪಾಕ್ ತಂಡವು ಬಾಂಗ್ಲಾದೇಶವನ್ನು ಸೋಲಿಸಿದೆ. ಇಲ್ಲಿ ಗೆದ್ದರೆ ಫೈನಲ್‌ ಹಾದಿ ಸುಗಮ. ಪಾಕ್ ತಂಡದ ಬ್ಯಾಟಿಂಗ್‌ ವಿಭಾಗವೂ ಚೆನ್ನಾಗಿದೆ. ಬೌಲಿಂಗ್ ಕೂಡ ಬಲಾಢ್ಯವಾಗಿರುವುದರಿಂದ ಅಪಾರ ಆತ್ಮವಿಶ್ವಾಸದಲ್ಲಿದೆ. ಭಾರತ ತಂಡಕ್ಕೆ ಕಠಿಣ ಪ್ರತಿಸ್ಪರ್ಧೆ ಒಡ್ಡುವ ಛಲದಲ್ಲಿದೆ. ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧಕೃಷ್ಣ, ತಿಲಕ್ ವರ್ಮಾ. ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಇಮಾಮ್ ಉಲ್ ಹಕ್, ಫಕರ್ ಜಮಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಆಘಾ ಸಲ್ಮಾನ್, ಇಫ್ತಿಕಾರ್ ಅಹಮದ್, ಶಾದಾಬ್ ಖಾನ್, ಫಾಹೀಂ ಅಶ್ರಫ್, ಶಾಹೀನ್ ಆಫ್ರಿದಿ, ನಸೀಪ್ ಷಾ, ಹ್ಯಾರಿಸ್ ರವೂಫ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಉಸಾಮಾ ಮೀರ್, ಅಬ್ದುಲ್ ಶಫೀಕ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸೀಂ ಜೂನಿಯರ್. ಪಂದ್ಯ ಆರಂಭ: ಮಧ್ಯಾಹ್ನ 3 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್. ಪಾಕ್ ಬೌಲಿಂಗ್‌ ಗಿಲ್ ಮೆಚ್ಚುಗೆ ಕೊಲಂಬೊ (ಪಿಟಿಐ): ಪಾಕಿಸ್ತಾನದ ಬೌಲಿಂಗ್ ಉತ್ತಮವಾಗಿದೆ. ಅದರೆ ಅವರ ಎದುರು ನಮ್ಮ ತಂಡವು ಹೆಚ್ಚು ಪಂದ್ಯಗಳನ್ನು ಆಡದ ಕಾರಣ ಮುಖ್ಯ ಟೂರ್ನಿಗಳಲ್ಲಿ ಎದುರಾದಾಗ ತುಸು ಕಷ್ಟವಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಶುಭಮನ್ ಗಿಲ್ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾವು ಬೇರೆ ಕೆಲವು ತಂಡಗಳ ಎದುರು ಆಗಾಗ ಪಂದ್ಯಗಳನ್ನು ಆಡುತ್ತೇವೆ. ಆ ರೀತಿ ಪಾಕಿಸ್ತಾನ ವಿರುದ್ಧ ಆಡಿಲ್ಲ. ಆದ್ದರಿಂದ ಸ್ವಲ್ಪ ವ್ಯತ್ಯಾಸವಾಗುತ್ತದೆ‘ ಎಂದರು. ಭಾರತ ಹಾಗೂ ಪಾಕ ತಂಡಗಳು ಕೇವಲ ಎಸಿದಿ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಉಳಿದಂತೆ ದ್ವಿಪಕ್ಷೀಯ ಸರಣಿಗಳನ್ನು ಆಡುವುದನ್ನು ಕೆಲವು ವರ್ಷಗಳಿಂದ ನಿಲ್ಲಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.