| ಸಮರವಿಕ್ರಮ, ಮೆಂಡಿಸ್ ಸುಂದರ ಬ್ಯಾಟಿಂಗ್ ಕೊಲಂಬೊ (ಪಿಟಿಐ): ಏಳು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡ ಸದೀರ ಸಮರವಿಕ್ರಮ ಮತ್ತು ಅರ್ಧಶತಕ ಗಳಿಸಿದ ಕುಶಾಲ ಮೆಂಡಿಸ್ ಅವರ ಆಟದಿಂದ ಶ್ರೀಲಂಕಾ ತಂಡವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಹೋರಾಟದ ಮೊತ್ತ ಗಳಿಸಿತು. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಶ್ರೀಲಂಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 257 ರನ್‌ ಗಳಿಸಿತು. ಸಮರವಿಕ್ರಮ (93; 72ಎ, 4X8, 6X2) ಹಾಗೂ ಮೆಂಡಿಸ್ (50; 73ಎ; 4X6, 6X1) ಅವರು ಚೆಂದದ ಬ್ಯಾಟಿಂಗ್ ಮಾಡಿದರು. ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲಂಕಾ ತಂಡದ ಆರಂಭಿಕ ಬ್ಯಾಟರ್ ಕರುಣಾರತ್ನೆ ಅವರು ಆರನೇ ಓವರ್‌ನಲ್ಲಿ ಹಸನ್ ಮೆಹಮೂದ್‌ ಎಸೆತಕ್ಕೆ ಔಟಾದರು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ನಿಸಾಂಕ (40; 60ಎ) ಅವರೊಂದಿಗೆ ಸೇರಿದ ಮೆಂಡಿಸ್ ಇನಿಂಗ್ಸ್‌ಗೆ ಬಲ ತುಂಬಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 74 ರನ್‌ ಸೇರಿಸಿದರು. ಇಸ್ಲಾಂ 24ನೇ ಓವರ್‌ನಲ್ಲಿ ಹಾಕಿದ ಬೌಲಿಂಗ್‌ನಲ್ಲಿ ನಿಸಾಂಕ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರೊಂದಿಗೆ ಜೊತೆಯಾಟ ಮುರಿಯಿತು. ಎರಡು ಓವರ್‌ಗಳ ಅಂತರದಲ್ಲಿ ಮೆಂಡಿಸ್ ಕೂಡ ಇಸ್ಲಾಂ ಬೌಲಿಂಗ್‌ನಲ್ಲಿ ಔಟಾದರು. ಆಗ ಕ್ರೀಸ್‌ನಲ್ಲಿದ್ದ ಸಮರವಿಕ್ರಮ ಏಕಾಂಗಿಯಾಗಿ ಹೋರಾಟ ಮಾಡಿದರು. ಒಂದು ಬದಿಯಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೂ ಸಮರವಿಕ್ರಮ ದಿಟ್ಟತನದ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ತಂಡವು ಗೌರವಯುತ ಮೊತ್ತ ಗಳಿಸಿತು. ಸಮರವಿಕ್ರಮ, ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ತಸ್ಕಿನ್ ಅಹಮದ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ಅಫಿಫ್ ಹುಸೇನ್‌ಗೆ ಕ್ಯಾಚಿತ್ತರು. ತಸ್ಕಿನ್ ಅಹಮದ್ ಹಾಗೂ ಹಸನ್ ಮೆಹಮೂದ್ ಅವರು ತಲಾ ಮೂರು ವಿಕೆಟ್ ಗಳಿಸಿದರು. ಶೊರಿಫುಲ್ ಇಸ್ಲಾಂ ಎರಡು ವಿಕೆಟ್‌ ಗಳಿಸಿ ಶ್ರೀಲಂಕಾದ ರನ್‌ ಗಳಿಕೆಗೆ ಅಡ್ಡಿಯಾದರು. ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 257 (ಪಥುಮ್ ನಿಸಾಂಕ 40, ಕುಶಾಲ ಮೆಂಡಿಸ್ 50, ಸದೀರ ಸಮರವಿಕ್ರಮ 93, ಶನಾಕ 24, ತಸ್ಕಿನ್ ಅಹಮದ್ 62ಕ್ಕೆ3, ಶೊರಿಫುಲ್ ಇಸ್ಲಾಂ 48ಕ್ಕೆ2, ಹಸನ್ ಮೆಹಮೂದ್ 57ಕ್ಕೆ3) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.