ಸೈಯದ್‌ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರುಣ್‌ಗೆ ಕೊಕ್; ರೋಹನ್ ಆಯ್ಕೆ ಬೆಂಗಳೂರು: ಅನುಭವಿ ಆಟಗಾರ ಕರುಣ್ ನಾಯರ್ ಅವರನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಗೆ ಆಯ್ಕೆ ಮಾಡಿರುವ ಸಂಭವನೀಯರ ತಂಡದಿಂದ ಕೈಬಿಡಲಾಗಿದೆ. ಟೆಸ್ಟ್ ಕ್ರಿಕೆಟ್ ತ್ರಿಶತಕ ಗಳಿಸಿದ ಭಾರತದ ಎರಡನೇ ಆಟಗಾರನೆಂಬ ಹೆಗ್ಗಳಿಕೆಯ ಆಟಗಾರ ಕರುಣ್ ಕಳೆದೆರಡು ಋತುಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಮಂಗಳವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿಯು 25 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಚೆಗಷ್ಟೇ ಕೋಚ್ ಸ್ಥಾನಕ್ಕೆ ನೇಮಕವಾಗಿರುವ ಪಿ.ವಿ. ಶಶಿಕಾಂತ್ ಅವರ ಮಾರ್ಗದರ್ಶನದಲ್ಲಿ ತಂಡವು ಇದೇ 29ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದೆ. ಅ.11ರಿಂದ ಟೂರ್ನಿಯ ಲೀಗ್ ಹಂತವು ಮೊಹಾಲಿಯಲ್ಲಿ ನಡೆಯಲಿದೆ. ‘ಯುವ ಆಟಗಾರರಿಗೆ ಸ್ಥಾನ ನೀಡಲು ಕರುಣ್ ನಾಯರ್ ಅವರನ್ನು ಕೈಬಿಡಲಾಗಿದೆ. ಇನ್ನುಳಿದ ಮಾದರಿಗಳಲ್ಲಿ ಅವರು ಸ್ಥಾನ ಪಡೆಯಲು ಪ್ರಯತ್ನಿಸಲು ಅವಕಾಶವಿದೆ. ಟಿ20 ಮಾದರಿಯಲ್ಲಿ ಪ್ರದರ್ಶನ ಸಾಮರ್ಥ್ಯ ಹಾಗೂ ವಯಸ್ಸು ಮಾನದಂಡವಾಗಿಟ್ಟುಕೊಂಡು ಅವಕಾಶ ನೀಡಿದ್ದೇವೆ. ಕರ್ನಾಟಕ ತಂಡವನ್ನು ಬಲಿಷ್ಠಗೊಳಿಸುವ ಸವಾಲು ಈಗ ನಮ್ಮ ಮುಂದಿದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಫಜಲ್ ಖಲೀಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಎಸ್‌ಸಿಎಯಿಂದ ಈಚೆಗೆ ನಡೆದ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ ರೋಹನ್ ಪಾಟೀಲ, ಮನೋಜ್ ಬಾಂಢಗೆ, ಸಿಸೊಡಿಯಾ ಅವರಿಗೂ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಕೊಟ್ಟಿದ್ದೇವೆ. ಲಭಿಸಿದ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವುದು ಆಟಗಾರರ ಸಾಮರ್ಥ್ಯಕ್ಕೆ ಬಿಟ್ಟಿದ್ದು’ ಎಂದರು. ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಿಸಿರುವ ತಂಡ ಇಂತಿದೆ: ಮಯಂಕ್ ಅಗರವಾಲ್,ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಎಲ್‌.ಆರ್. ಚೇತನ್, ರೋಹನ್ ಎ ಪಾಟೀಲ, ಅಭಿನವ್ ಮನೋಹರ್, ಆರ್. ಸ್ಮರಣ್, ಲವನೀತ್ ಸಿಸೊಡಿಯಾ, ಬಿ.ಆರ್. ಶರತ್, ನಿಹಾಲ್ ಉಲ್ಲಾಳ್(ಮೂವರು ವಿಕೆಟ್‌ಕೀಪರ್‌), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಎಸ್‌.ಎ. ರಿಷಿ ಬೋಪಣ್ಣ, ರಿತೇಶ್ ಭಟ್ಕಳ, ಜೆ. ಸುಚಿತ್, ಶುಭಾಂಗ್ ಹೆಗಡೆ, ವಿ. ಕೌಶಿಕ್, ವೈಶಾಖ್ ವಿಜಯಕುಮಾರ್, ವಿದ್ಯಾಧರ್ ಪಾಟೀಲ, ಎಂ. ವೆಂಕಟೇಶ್, ಆದಿತ್ಯ ಗೋಯಲ್, ಮನೋಜ್ ಬಾಂಢಗೆ, ವಿದ್ವತ್ ಕಾವೇರಪ್ಪ, ಎಸ್‌.ಜೆ. ನಿಕಿನ್ ಜೋಸ್, ಕೆ.ಸಿ. ಕಾರ್ಯಪ್ಪ. ಪಿ.ವಿ. ಶಶಿಕಾಂತ್ (ಕೋಚ್), ಜಾಬಪ್ರಭು (ಫಿಸಿಯೊಥೆರಪಿಸ್ಟ್), ಕೆ.ಸಿ. ಅವಿನಾಶ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಅನುತೋಷ್ ಪೋಳ್ (ಮ್ಯಾನೇಜರ್), ಸಿ.ಎಂ. ಸೋಮಸುಂದರ (ಮಸಾಜ್‌ ಪರಿಣತ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.