2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ: 123 ವರ್ಷಗಳ ಬಳಿಕ ಸ್ಥಾನ ಮುಂಬೈ : ಕ್ರಿಕೆಟ್‌ (ಟಿ–20 ಮಾದರಿ) ಅಟವನ್ನು 2028ರ ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ ಕ್ರೀಡೆಗಳ ಪಟ್ಟಿಗೆ ಸೋಮವಾರ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಕ್ರಿಕೆಟ್‌ ಮಹತ್ವಾಕಾಂಕ್ಷೆಗೆ ಆನೆಬಲ ಬಂದಂತಾಗಿದೆ. ಚುಟುಕು ಕ್ರಿಕೆಟ್‌ ಜೊತೆಗೆ, ಸ್ವ್ಕಾಷ್‌, ಬೇಸ್‌ಬಾಲ್‌/ ಸಾಫ್ಟ್‌ಬಾಲ್‌, ಲ್ಯಾಕ್ರೊಸ್ ಮತ್ತು ಫ್ಲ್ಯಾಗ್‌ ಫುಟ್‌ಬಾಲ್ ಆಟಗಳ ಸೇರ್ಪಡೆಗೂ, ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ಯು ತನ್ನ 141ನೇ ಅಧಿವೇಶನದಲ್ಲಿ ಅನುಮೋದನೆ ನೀಡಿದೆ. ಜಿಯೊ ವರ್ಲ್ಡ್‌ಸಿಟಿಯಲ್ಲಿ ಈ ಮೂರು ದಿನಗಳ ಅಧಿವೇಶನ ನಡೆದಿದೆ. ಐಒಸಿಯ ಕಾರ್ಯಕಾರಿ ಮಂಡಳಿ ಮಾಡಿದ ಶಿಫಾರಸುಗಳಿಗೆ ಧ್ವನಿಮತದ ಮೂಲಕ ಒಪ್ಪಿಗೆ ಪಡೆದ ನಂತರ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರು ಒಲಿಂಪಿಕ್ಸ್‌ಗೆ ಕ್ರಿಕೆಟ್ ಮತ್ತು ಇತರ ಆಟಗಳ ಸೇರ್ಪಡೆಯನ್ನು ಘೋಷಿಸಿದರು. ಈ ಐದು ಆಟಗಳ ಸೇರ್ಪಡೆಗೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ 99 ಸದಸ್ಯರ ಪೈಕಿ ಇಬ್ಬರಷ್ಟೇ ವಿರೋಧ ಸೂಚಿಸಿದರು. ಒಲಿಂಪಿಕ್‌ ಶೂಟಿಂಗ್ ಚಾಂಪಿಯನ್ ಹಾಗೂ ಲಾಸ್‌ ಏಂಜಲೀಸ್‌ 2028ರ ಕ್ರೀಡಾ ನಿರ್ದೇಶಕ ಆಗಿರುವ ಇಟಲಿಯ ನಿಕೊಲೊ ಕ್ಯಾಂಪ್ರಿಯಾನಿ ಅವರು ಈ ವೇಳೆ ವಿರಾಟ್‌ ಕೊಹ್ಲಿ ಅವರ ಜನಪ್ರಿಯತೆಯನ್ನು ಪ್ರಸ್ತಾಪಿಸಿದರು. ‘ಅಂದಾಜು 2.5 ಶತಕೋಟಿ ಅಭಿಮಾನಿಗಳಿರುವ ಜಗತ್ತಿನ ಎರಡನೇ ಅತಿ ಜನಪ್ರಿಯ ಕ್ರೀಡೆಯನ್ನು ನಾಉ ಸ್ವಾಗತಿಸುತ್ತಿದ್ದೇವೆ. ಲಾಸ್‌ ಏಂಜಲೀಸ್‌ನಲ್ಲೇ ಏಕೆ ಎಂಬ ಪ್ರಶ್ನೆ ಏಳಬಹುದು. ಆದರೆ ಕ್ರಿಕೆಟ್‌ ಆಟವನ್ನು ಅಮೆರಿಕದಲ್ಲಿ ಬೆಳೆಸಲು ನಾವು ಬದ್ಧರಾಗಿದ್ದು, ಮೇಜರ್‌ ಕ್ರಿಕೆಟ್‌ ಲೀಗ್‌ ನಡೆಯುವ ಮೂಲಕ ನಾವು ಈಗಾಗಲೇ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟಾಗಿದೆ’ ಎಂದು ಹೇಳಿದರು. ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಟಿ–20 ವಿಶ್ವಕಪ್ ನಡೆಯಲಿದೆ ಎಂದರು. ‘ನನ್ನ ಸ್ನೇಹಿತ ವಿರಾಟ್‌ (ಕೊಹ್ಲಿ) ಅವರಿಗೆ ಸಾಮಜಿಕ ಜಾಲತಾಣಗಳಲ್ಲಿ 34 ಕೋಟಿ ಫಾಲೊವರ್‌ಗಳಿದ್ದು, ವಿಶ್ವದ ಮೂರನೇ ಜನಪ್ರಿಯ ಕ್ರೀಡಾಪಟು ಆಗಿದ್ದಾರೆ. ಇದು ಲೆ ಬ್ರಾನ್ ಜೇಮ್ಸ್‌, ಟಾಮ್‌ ಬ್ರಾಡಿ ಮತ್ತು ಟೈಗರ್ ವುಡ್ಸ್ ಅವರಿಗಿಂತ ಅಧಿಕವಾಗಿದೆ. ಅತಿ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಕ್ರಿಕೆಟ್‌ಗೆ ಭಾರಿ ಸಂಖ್ಯೆಯ ಅಭಿಮಾನಿವರ್ಗ, ಕ್ರಿಕೆಟ್ ಸೇರ್ಪಡೆಗೆ ಐಸಿಸಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿದ ಬೆಂಬಲವೂ, ಕ್ರಿಕೆಟ್‌ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ನೆರವಾಗಿದೆ. 2021ರಲ್ಲಿ ಮೊದಲ ಬಾರಿ ತನ್ನ ನಿಲುವು ಬದಲಿಸಿ, ಒಲಿಂಪಿಕ್‌ ಕ್ರೀಡೆಗಳಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಬೆಂಬಲ ಸೂಚಿಸಿತು. ಅದಕ್ಕೆ ಮೊದಲು, ತನ್ನ ಸ್ವಾಯತ್ತತೆಗೆ ಧಕ್ಕೆಯಾಗಬಹುದೆಂಬ ಆತಂಕದಿಂದ ಅದು ಒಲವು ತೋರಿಸಿರಲಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರೂ ಈ ನಡೆಯನ್ನು ಸ್ವಾಗತಿಸಿದ್ದು, ‘ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ, ಆಟಕ್ಕೆ ಹೊಸ ಗಡಿಗಳನ್ನು ತೆರೆಯಲಿದೆ’ ಎಂದಿದ್ದಾರೆ. ‘ಮೂಲಸೌಕರ್ಯಗಳ ಅಭಿವೃದ್ಧಿ, ಸ್ಪರ್ಧೆಯ ವ್ಯಾಪಕತೆ, ಯುವ ಅಭಿವೃದ್ಧಿ, ಅಧಿಕಾರಿಗಳಿಗೆ, ವೃತ್ತಿಪರರಿಗೆ ಹೊಸ ಅವಕಾಶವನ್ನು ತೆರೆಯಲಿದೆ’ ಎಂದರು.1900ರಲ್ಲಿ ಆಡಲಾಗಿತ್ತು. ಕ್ರಿಕೆಟ್ ಆಟವನ್ನು 1900ರ ಕ್ರೀಡೆಗಳಲ್ಲಿ (ಪ್ಯಾರಿಸ್‌) ಆಡಲಾಗಿತ್ತು. ಆ ಬಾರಿ ಇಂಗ್ಲೆಂಡ್‌ ತಂಡ, ಫ್ರಾನ್ಸ್‌ ತಂಡವನ್ನ ಸೋಲಿಸಿತ್ತು. ಈ ಘೋಷಣೆಯೊಂದಿಗೆ, ಭಾರತದಲ್ಲಿ ಐಒಸಿಯ ಒಲಿಂಪಿಕ್ಸ್‌ ಪ್ರಸಾರದ ಹಕ್ಕುಗಳ ಮೌಲ್ಯ (ಆದಾಯ) ಗಮನಾರ್ಹವಾಗಿ ಏರುವ ನಿರೀಕ್ಷೆಯಿದೆ. ಈ ಘೋಷಣೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ ಕೂಡ ಸಂತಸ ವ್ಯಕ್ತಪಡಿಸಿದೆ. /, (T20), , () @LA28. 141st .#IOCMumbai2023… ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.