T20 | ಗಾಯದ ಸಮಸ್ಯೆ; ಜಸ್‌ಪ್ರೀತ್ ಬೂಮ್ರಾ ಹೊರಕ್ಕೆ ನವದೆಹಲಿ: ಮುಂಬರುವ ಟ್ವೆಂಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದ್ದು, ಗಾಯದ ಸಮಸ್ಯೆ ಎದುರಿಸುತ್ತಿರುವ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ. ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿರುವ ಪಿಟಿಐ, ಬೆನ್ನುಮೂಳೆಯ ಸ್ಟ್ರೆಸ್ ಫ್ರಾಕ್ಚರ್ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬೂಮ್ರಾ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಿದೆ. ಇದರೊಂದಿಗೆ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾಗೆ ಭಾರಿ ಹಿನ್ನಡೆ ಎದುರಾಗಿದೆ. ಇತ್ತೀಚೆಗಷ್ಟೇ ಗಾಯದಿಂದಾಗಿ ಆಲ್‌ರೌಂಡರ್ ರವೀಂದ್ರ ಜಡೇಜ ಸೇವೆಯಿಂದಲೂ ಟೀಮ್ ಇಂಡಿಯಾ ವಂಚಿತವಾಗಿತ್ತು. ಈಗ ಜಸ್‌ಪ್ರೀತ್ ಬೂಮ್ರಾ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಕುತೂಹಲವೆನಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಬೂಮ್ರಾ ಅಲಭ್ಯರಾಗಲಿದ್ದಾರೆ. ಗುರುವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲೂ ಆಡಿರಲಿಲ್ಲ. ಬೂಮ್ರಾ ಗಾಯದ ಸಮಸ್ಯೆ ಗಂಭೀರವಾಗಿದ್ದು, ಕನಿಷ್ಠ ಆರು ತಿಂಗಳುಗಳ ವಿಶ್ರಾಂತಿ ಬೇಕಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.