ನೇಪಾಳದ ಕ್ರಿಕೆಟಿಗ ಲಾಮಿಚಾನೆ ಪೊಲೀಸ್ ವಶಕ್ಕೆ ಕಠ್ಮಂಡು (ಎಎಫ್‌ಪಿ): ಅತ್ಯಾಚಾರದ ಆರೋಪ ಎದುರಿಸುತ್ತಿರುವ ನೇಪಾಳದ ಕ್ರಿಕೆಟಿಗ ಸಂದೀಪ್ ಲಾಮಿಚಾನೆಯನ್ನು ನೇಪಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಲಾಮಿಚಾನೆ ವಿರುದ್ಧ 17 ವರ್ಷದ ಬಾಲಕಿಯೊಬ್ಬಳು ದೂರು ನೀಡಿದ್ದರು. ಆ ಸಂದರ್ಭದಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಫ್ರ್ಯಾಂಚೈಸಿ ಲೀಗ್ ಟೂರ್ನಿಯಲ್ಲಿ ಆಡಲು ತೆರಳಿದ್ದ ಲಾಮಿಚಾನೆ ನಂತರ ನಾಪತ್ತೆಯಾಗಿದ್ದರು. ಗುರುವಾರ ನೇಪಾಳಕ್ಕೆ ಮರಳಿದ ಲಾಮಿಚಾನೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಠ್ಮಂಡು ಜಿಲ್ಲಾ ಪೊಲೀಸರು ಖಚಿತಪಡಿಸಿದ್ದಾರೆ. ತಾವು ನೇಪಾಳಕ್ಕೆ ಮರಳುತ್ತಿರುವುದಾಗಿ ಲಾಮಿಚಾನೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ‘ತನಿಖೆಯ ಪ್ರತಿಯೊಂದು ಹಂತದಲ್ಲಿಯೂ ಪೊಲೀಸರಿಗೆ ಸಹಕಾರ ನೀಡುತ್ತೇನೆ. ನಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸುತ್ತೇನೆ. ನನಗೆ ನ್ಯಾಯ ಸಿಗಲಿದೆ’ ಎಂದು 22 ವರ್ಷದ ಸಂದೀಪ್ ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.