ಭಾರತ–ದಕ್ಷಿಣ ಆಫ್ರಿಕಾ ಏಕದಿನ ಸರಣಿ: ಸರಣಿ ಗೆಲುವಿನ ಕನಸು ನವದೆಹಲಿ (ಪಿಟಿಐ): ಎಡಗೈ ಬ್ಯಾಟರ್ ಶಿಖರ್ ಧವನ್ ಅವರಿಗೆ ತಮ್ಮ ತವರಿನ ಅಂಗಳದಲ್ಲಿ ಭಾರತ ತಂಡವನ್ನು ಏಕದಿನ ಕ್ರಿಕೆಟ್‌ನಲ್ಲಿ ಮುನ್ನಡೆಸುವ ಅವಕಾಶ ಲಭಿಸಿದೆ. ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಸರಣಿಯ ಕಳೆದೆರಡೂ ಪಂದ್ಯಗಳಲ್ಲಿ ಶಿಖರ್ ಹಾಗೂ ಶುಭಮನ್ ಗಿಲ್ ಜೋಡಿಯು ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿಲ್ಲ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹಾಗೂಶ್ರೇಯಸ್ ಅಯ್ಯರ್ ಮಿಂಚಿದ್ದರು. ಆದರೆ ಆ ಪಂದ್ಯದಲ್ಲಿ ತಂಡ ಸೋತಿತ್ತು. ಭಾನುವಾರ ರಾಂಚಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅಜೇಯ ಶತಕ ಹಾಗೂ ಇಶಾನ್ ಕಿಶನ್ 93 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದ್ದರು. ಇದರಿಂದಾಗಿ ಮೂರು ಪಂದ್ಯಗಳ ಸರಣಿಯು 1–1ರಿಂದ ಸಮಬಲವಾಗಿದೆ. ಕೊನೆಯ ಪಂದ್ಯದಲ್ಲಿ ಜಯಿಸುವ ತಂಡವು ಸರಣಿ ಗೆಲುವು ಸಾಧಿಸಲಿರುವುದರಿಂದ ಕುತೂಹಲ ಗರಿಗೆದರಿದೆ. ಶಿಖರ್ ಈ ಸರಣಿಯಲ್ಲಿ ಇದುವರೆಗೆ ಕೇವಲ 17 ರನ್‌ ಗಳಿಸಿದ್ದಾರೆ. ಗಿಲ್ ಕೂಡ ತಮಗೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಸಂಜು ಸ್ಯಾಮ್ಸನ್ ಉತ್ತಮ ಲಯದಲ್ಲಿರುವುದರಿಂದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಶಹಬಾಜ್ ಅಹಮದ್ ಹಾಗೂ ಶಾರ್ದೂಲ್ ಪ್ರಮುಖ ಶಕ್ತಿಯಾಗಿದ್ದಾರೆ. ಆದರೆ ಆತಿಥೇಯರು ಸುಲಭದ ಗೆಲುವನ್ನು ನಿರೀಕ್ಷಿಸುವಂತಿಲ್ಲ. ಮೊದಲ ಪಂದ್ಯದಲ್ಲಿ ಗೆದ್ದಿದ್ದ ದಕ್ಷಿಣ ಆಫ್ರಿಕಾ ಎರಡನೇ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಹಾಗೂ ಅಗ್ರಕ್ರಮಾಂಕದ ಬ್ಯಾಟಿಂಗ್‌ನಲ್ಲಿ ದುರ್ಬಲವಾಗಿತ್ತು. ಆದರೆ, ಡೇವಿಡ್ ಮಿಲ್ಲರ್, ರೀಜಾ ಹೆನ್ರಿಕ್ಸ್ ಹಾಗೂ ಏಡನ್ ಮರ್ಕರಂ ಎರಡೂ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ಮೆರೆದಿದ್ದಾರೆ. ಕಗಿಸೊ ರಬಾಡ, ಲುಂಗಿ ಗಿಡಿ ಹಾಗೂ ವೇಯ್ನ್ ಪಾರ್ನೆಲ್ ಬೌಲಿಂಗ್‌ನಲ್ಲಿ ಮಿಂಚುತ್ತಿರುವುದರಿಂದಾಗಿ ತಂಡವು ಸಮತೋಲನಗೊಂಡಿದೆ. ಅದರಿಂದಾಗಿ ಆತಿಥೇಯರು ಯಾವುದೇ ಹಂತದಲ್ಲಿ ಹಿಡಿತ ಸಡಿಲಿಸಿದರೂ ಪ್ರವಾಸಿ ಬಳಗವು ಅದರ ಲಾಭ ಪಡೆಯುವುದು ಖಚಿತ. ಆರಂಭ: ಮಧ್ಯಾಹ್ನ 1.30 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.