ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಥಾಯ್ಲೆಂಡ್ ಸವಾಲು ಸಿಲೆಟ್ (ಪಿಟಿಐ): ಮಹಿಳೆಯರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್‌ ಪ್ರವೇಶ ಗಿಟ್ಟಿಸಿಕೊಂಡಿರುವ ಭಾರತ ತಂಡವು ಸೋಮವಾರ ಲೀಗ್ ಹಂತದ ಕೊನೆಯ ಪಂದ್ಯ ಆಡಲಿದೆ. ಹರ್ಮನ್‌ಪ್ರೀತ್ ಕೌರ್ ಬಳಗವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಿಂದಾಗಿ ಈ ಪಂದ್ಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡುವ ಸಾಧ್ಯತೆ ಇದೆ. ಬೆಂಚ್‌ನಲ್ಲಿರುವ ಆಟಗಾರ್ತಿಯರಿಗೆ ಕಣಕ್ಕಿಳಿಯುವ ಅವಕಾಶ ಸಿಗಬಹುದು. ಆರಂಭಿಕ ಜೋಡಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಅವರು ಶನಿವಾರ ಬಾಂಗ್ಲಾ ವಿರುದ್ಧದಲ್ಲಿ ಅಮೋಘ ಆಟವಾಡಿತ್ತು. ಅವರಿಬ್ಬರೂ ಲಯಕ್ಕೆ ಮರಳಿರುವುದರಿಂದ ತಂಡದ ಮನೋಬಲ ಮತ್ತಷ್ಟು ವೃದ್ಧಿಸಿದೆ. ಈ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಮಾತ್ರ ಸೋತಿದೆ. ಅದೇ ಕ್ರಿಕೆಟ್‌ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಥಾಯ್ಲೆಂಡ್ ತಂಡವು ಪಾಕ್‌ ಬಳಗವನ್ನು ಹಣಿದಿತ್ತು. ಬಲಿಷ್ಠ ಭಾರತಕ್ಕೂ ಕಠಿಣ ಸವಾಲೊಡ್ಡುವ ಹುಮ್ಮಸ್ಸಿನಲ್ಲಿ ನೇರುಮೋಯ್ ಚೈವೈ ನಾಯಕತ್ವದ ಥಾಯ್ಲೆಂಡ್ ಇದೆ. ಪಾಕ್ ಎದರು ಅರ್ಧಶತಕ ಹೊಡೆದು ಮಿಂಚಿದ್ದ ನಥಾಕನ್ ಚಾಂತಮ್ ಮತ್ತು ಬೌಲಿಂಗ್‌ನಲ್ಲಿ ಟಿಪೊಚ್ ಅವರು ತಂಡದ ಶಕ್ತಿಯಾಗಿದ್ದಾರೆ. ಆರಂಭ: ಮಧ್ಯಾಹ್ನ 1ರಿಂದ ನೇರಪ್ರಸಾರ: ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.