ಭಾರತ– ನ್ಯೂಜಿಲೆಂಡ್‌ ಅಭ್ಯಾಸ ಪಂದ್ಯ ರದ್ದು ಬ್ರಿಸ್ಬೇನ್‌ (ಪಿಟಿಐ): ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದೇ ತಾಣದಲ್ಲಿ ಬುಧವಾರ ಬೆಳಿಗ್ಗೆ ಪಾಕಿಸ್ತಾನ ಮತ್ತು ಆಫ್ಗಾನಿಸ್ತಾನ ತಂಡಗಳ ನಡುವೆ ಅಭ್ಯಾಸ ಪಂದ್ಯ ಆಯೋಜಿಸಲಾಗಿತ್ತು. ಆಫ್ಗನ್‌ ತಂಡ ಪಾಕ್‌ ಗೆಲುವಿಗೆ 155 ರನ್‌ಗಳ ಗುರಿ ನೀಡಿತ್ತು. ಆದರೆ ಪಾಕಿಸ್ತಾನದ ಇನಿಂಗ್ಸ್‌ ವೇಳೆ ಮಳೆ ಸುರಿದು ಪಂದ್ಯ ಅರ್ಧದಲ್ಲೇ ಮೊಟಕುಗೊಂಡಿತು. ಮಧ್ಯಾಹ್ನದ ಬಳಿಕವೂ ಮಳೆ ಮುಂದುವರಿದ ಕಾರಣ ಭಾರತ– ಕಿವೀಸ್‌ ಪಂದ್ಯವೂ ನಡೆಯಲಿಲ್ಲ. ಸೋಮವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ, ಆರು ರನ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ರೋಹಿತ್‌ ಶರ್ಮ ಬಳಗ ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ, ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.