ಅಭ್ಯಾಸ ಪಂದ್ಯ: ರಾಹುಲ್ ಅರ್ಧಶತಕ ವ್ಯರ್ಥ ಪರ್ತ್(ಪಿಟಿಐ): ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರದ ಅರ್ಧಶತಕ ದಾಖಲಿಸಿದರೂ ಭಾರತ ತಂಡವು ಇಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ರ್ನ್ ಆಸ್ಟ್ರೇಲಿಯಾ ಎದುರು ಸೋತಿತು. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 168 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳೀಗೆ 132 ರನ್‌ ಗಳಿಸಿತು. ರಾಹುಲ್ (74; 55ಎಸೆತ) ಏಕಾಂಗಿ ಹೋರಾಟ ಮಾಡಿದರು. ಉಳಿದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಇದರಿಂದಾಗಿ ಭಾರತ ಸೋತಿತು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅವರು ಬ್ಯಾಟಿಂಗ್ ಮಾಡಲಿಲ್ಲ. ಕೇವಲ ಫೀಲ್ಡಿಂಗ್ ಮಾತ್ರ ಮಾಡಿದರು. ರಿಷಭ್ ಪಂತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಎಸೆತಗಳನ್ನು ಎದುರಿಸುವಲ್ಲಿ ಅವರು ಪರದಾಡಿದರು. ದೀಪಕ್ ಹೂಡಾ 9 ಎಸೆತಗಳಲ್ಲಿ ಆರು ರನ್‌ ಗಳಿಸಿದರು. ಎರಡು ಸಿಕ್ಸರ್ ಬಾರಿಸಿದ ಹಾರ್ದಿಕ್ ಪಾಂಡ್ಯ ಒಂಬತ್ತು ಎಸೆತಗಳಲ್ಲಿ 17 ರನ್‌ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 10 ರನ್‌ ಗಳಿಸಿದರು. ಸಂಕ್ಷಿಪ್ತ ಸ್ಕೋರು: ವೆಸ್ಟರ್ನ್ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8ಕ್ಕೆ168 (ಡಾರ್ಸಿ ಶಾರ್ಟ್ 52, ನಿಕ್ ಹಾಬ್ಸನ್ 64, ಆರ್. ಅಶ್ವಿನ್ 32ಕ್ಕೆ3, ಹರ್ಷಲ್ ಪಟೇಲ್ 27ಕ್ಕೆ2) ಭಾರತ: 20 ಓವರ್‌ಗಳಲ್ಲಿ 8ಕ್ಕೆ 132 (ಕೆ.ಎಲ್. ರಾಹುಲ್ 74, ಲ್ಯಾನ್ಸ್ ಮೊರಿಸ್ 23ಕ್ಕೆ2) ಫಲಿತಾಂಶ ವೆಸ್ಟ್ ಆಸ್ಟ್ರೇಲಿಯಾಕ್ಕೆ 36 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.