ಏಳನೇ ಪ್ರಶಸ್ತಿ ಮೇಲೆ ಭಾರತ ಕಣ್ಣು ಸಿಲೆಟ್ (ಪಿಟಿಐ): ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಶನಿವಾರ ಇಲ್ಲಿ ನಡೆಯಲಿರುವ ಮಹಿಳೆಯರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಸವಾಲೊಡ್ಡಲಿದೆ. ಏಳನೇ ಸಲ ಪ್ರಶಸ್ತಿ ಜಯದ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಲಂಕಾ ಬಳಗಕ್ಕಿಂತ ಬಲಾಢ್ಯ ಹಾಗೂ ಅನುಭವಿ ಆಟಗಾರ್ತಿಯರನ್ನು ಒಳಗೊಂಡಿದೆ. ಸೆಮಿಫೈನಲ್‌ನಲ್ಲಿ ಭಾರತವು ಥಾಯ್ಲೆಂಡ್ ಎದುರು ಸುಲಭವಾಗಿ ಗೆದ್ದಿತ್ತು. ಆದರೆ, ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ಕಠಿಣ ಸವಾಲನ್ನು ಮೆಟ್ಟಿ ನಿಂತಿದ್ದ ಲಂಕಾ ತಂಡವು ಕೇವಲ 1 ರನ್ ಅಂತರದ ರೋಚಕ ಜಯಸಾಧಿಸಿತ್ತು. ಆದ್ದರಿಂದ ಭಾರತ ತಂಡಕ್ಕೆ ಲಂಕಾ ಬಳಗವು ದಿಟ್ಟ ಸವಾಲು ಒಡ್ಡುವ ನಿರೀಕ್ಷೆ ಇದೆ. ಭಾರತದ ಆರಂಭಿಕ ಜೋಡಿ ಶಫಾಲಿ ವರ್ಮಾ ಹಾಗೂ ಸ್ಮತಿ ಮಂದಾನ ಉತ್ತಮ ಲಯದಲ್ಲಿರುವುದು ಸಮಾಧಾನಕರ ವಿಷಯ. ಅಲ್ಲದೇ ಮಧ್ಯಮಕ್ರಮಾಂಕದಲ್ಲಿ ಹರ್ಮನ್‌ಪ್ರೀತ್, ಜೆಮಿಮಾ ರಾಡ್ರಿಗಸ್ ಹಾಗೂ ರಿಚಾ ಘೋಷ್ ಅವರು ಮಿಂಚುವ ವಿಶ್ವಾಸ ಮೂಡಿಸಿದ್ದಾರೆ. ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ, ಸ್ನೇಹಾ ರಾಣಾ ಅವರು ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸಮರ್ಥ ಬೌಲರ್‌ಗಳಾಗಿದ್ದಾರೆ. ವಿಜಯಪುರದ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ ಎದುರಾಳಿಗಳ ರನ್‌ ಗಳಿಕೆಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಚಾಮರಿ ಅಟಪಟ್ಟು ನಾಯಕತ್ವದ ಲಂಕಾ ತಂಡದ ಆಟಗಾರ್ತಿಯರೂ ಭಾರತಕ್ಕೆ ಆಘಾತ ನೀಡುವ ಛಲದಲ್ಲಿದ್ದಾರೆ. ತಂಡವು ಸೆಮಿಫೈನಲ್ ಜಯಿಸಿದಾಗ ಆಟಗಾರ್ತಿಯರು ನರ್ತಿಸಿ ಸಂಭ್ರಮಿಸಿದ ವಿಡಿಯೊ ಈಗ ವೈರಲ್ ಆಗಿದೆ. ಅಂತಹದ್ದೇ ಮತ್ತೊಂದು ಸಂಭ್ರಮಕ್ಕಾಗಿ ಲಂಕಾ ತಂಡವು ತಂತ್ರಗಾರಿಕೆ ರೂಪಿಸಿದೆ. ಆದರೆ ಹಾದಿ ಕಠಿಣವಾಗಿದೆ. ತಂಡಗಳು:ಭಾರತ:ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಎಸ್. ಮೇಘನಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ದಯಾಳನ್ ಹೇಮಲತಾ, ಸ್ನೇಹಾ ರಾಣಾ, ರಾಧಾ ಯಾದವ್, ರಾಜೇಶ್ವರಿ ಗಾಯಕವಾಡ, ರೇಣುಕಾ ಠಾಕೂರ್, ಮೇಘನಾ ಸಿಂಗ್, ಕಿರಣ್ ನವಿಗೆರೆ, ಪೂಜಾ ವಸ್ತ್ರಕರ್. ಶ್ರೀಲಂಕಾ: ಚಾಮರಿ ಅಟಪಟ್ಟು (ನಾಯಕಿ), ನೀಲಾಕ್ಷಿ ಡಿಸಿಲ್ವಾ, ಕವೀಶಾ ದಿಲಹರಿ, ಅಕಿನಿ ಕುಲಸೂರಿಯಾ, ಸುಗಂಧ ಕುಮಾರಿ, ಹರ್ಷಿತಾ ಸಮರವಿಕ್ರಮ, ಮಧುಶಿಕಾ ಮೆತಾಂಡಾ, ಹಸಿನಿ ಪೆರೆರಾ, ಒಡದಿ ರಣಸಿಂಗೆ, ಇನೊಕಾ ರಣವೀರಾ, ಅನುಷ್ಕಾ ಸಂಜೀವನಿ, ಕೌಶಾನಿ ನುತ್ಯಾಂಗನಾ, ಮಾಲ್ಶಾ ಶೆಹಾನಿ, ರಶ್ಮಿ ಸಿಲ್ವಾ. ಪಂದ್ಯ ಆರಂಭ: ಮಧ್ಯಾಹ್ನ 1 ನೇರಪ್ರಸಾರ: ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.