ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸ್ಥಾನ: ಹಿಂದೆ ಸರಿದ ಸೌರವ್‌ ಗಂಗೂಲಿ ಕೋಲ್ಕತ್ತ : ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ಥಾನವನ್ನು ಮತ್ತೆ ವಹಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅವರ ಅಣ್ಣ ಸ್ನೇಹಶಿಶ್‌ ಗಂಗೂಲಿ, ಸಿಎಬಿಯ ನೂತನ ಅಧ್ಯಕ್ಷರಾಗಲಿದ್ದಾರೆ. ಸಿಎಬಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕಳೆದ ವಾರ ಹೇಳಿದ್ದ ಗಂಗೂಲಿ, ಇದೀಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ‘ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಮಾತ್ರ ಸ್ಪರ್ಧಿಸುತ್ತೇನೆ ಎಂದಿದ್ದೆ. ಆದರೆ ಅವಿರೋಧ ಆಯ್ಕೆ ನಡೆಯಲಿರುವುದರಿಂದ ಹಿಂದೆ ಸರಿದಿದ್ದೇನೆ’ ಎಂದು ಗಂಗೂಲಿ ಹೇಳಿದರು. ‘ಮತ್ತೆ ಅವಿರೋಧವಾಗಿ ಆಯ್ಕೆಯಾಗುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಬಂಗಾಳ ಕ್ರಿಕೆಟ್‌ ಸಂಸ್ಥೆಗೆ ಕೆಲಸ ಮಾಡಲು ಇತರರಿಗೂ ಅವಕಾಶ ಸಿಗಲಿ’ ಎಂದರು. ಸಿಎಬಿ ಸರ್ವ ಸದಸ್ಯರ ಸಭೆ ಅ.31 ರಂದು ನಡೆಯಲಿದ್ದು, ಹಾಲಿ ಕಾರ್ಯದರ್ಶಿಯಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸ್ನೇಹಶಿಶ್‌ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಅಮಲೇಂದು ಬಿಸ್ವಾಸ್‌ ಉಪಾಧ್ಯಕ್ಷರಾಗಲಿದ್ದು, ನರೇಶ್‌ ಓಜಾ ಕಾರ್ಯದರ್ಶಿಯ ಹುದ್ದೆ ವಹಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.