ಫಿಂಚ್‌ ಪಡೆಗೆ ಪುಟಿದೇಳುವ ವಿಶ್ವಾಸ ಪರ್ತ್‌: ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡವು ಪುಟಿದೇಳುವ ವಿಶ್ವಾಸದಲ್ಲಿದೆ. ಮಂಗಳವಾರ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸೂಪರ್ 12 ಹಂತದ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಆ್ಯರನ್‌ ಫಿಂಚ್‌ ನಾಯಕತ್ವದ ಆತಿಥೇಯ ಆಸ್ಟ್ರೇಲಿಯಾ ಮೊದಲ ಸೆಣಸಾಟದಲ್ಲಿ ನ್ಯೂಜಿಲೆಂಡ್‌ ಎದುರು 89 ರನ್‌ಗಳ ಭಾರೀ ಅಂತರದ ಸೋಲನುಭವಿಸಿತ್ತು. ಆದರೆ ಶ್ರೀಲಂಕಾ ತಂಡವು ಭಾನುವಾರ ಐರ್ಲೆಂಡ್‌ಗೆ ಸೋಲುಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ‘ನಮ್ಮ ತಂಡದ ಆಡುವ ಹನ್ನೊಂದರ ಬಳಗದ ಮೇಲೆ ವಿಶ್ವಾಸವಿದೆ. ಕಿವೀಸ್‌ ಎದುರಿನ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಲಿಲ್ಲ ಎಂಬುದು ನಿಜ. ಆದರೆ ಒಮ್ಮೆ ನಾವು ಲಯ ಕಂಡುಕೊಂಡರೆ ನಮ್ಮನ್ನು ಮಣಿಸುವುದು ಕಷ್ಟ‌‘ ಎಂದು ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ ಹೇಳಿದ್ದಾರೆ. ಶ್ರೀಲಂಕಾ ತಂಡವು ಮೊದಲ ಹಣಾಹಣಿಯಲ್ಲಿ ಸ್ಪಿನ್ನರ್‌ಗಳಾದ ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ಅವರ ಬೌಲಿಂಗ್ ನೆರವಿನಿಂದ ಐರ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತ್ತು. ಈ ಜೋಡಿಯು ತಮ್ಮ ದೇಶಕ್ಕೆ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಬೌಲಿಂಗ್‌ ಕೈಚಳಕದ ಮೂಲಕ ಕಾಡಿದ್ದರು. ಆದರೆ ಇಲ್ಲಿಯ ವಾತಾವರಣ ಭಿನ್ನವಿದೆ. ‘ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್‌ಗೆ ಸೋತಿದೆ. ಆದರೆ ನಾವು ಗೆದ್ದಿದ್ದೇವೆ. ಹೀಗಾಗಿ ನಮಗೆ ಆತ್ಮವಿಶ್ವಾಸ ಅವರಿಗಿಂತ ಹೆಚ್ಚು ಇದೆ‘ ಎಂದು ತೀಕ್ಷಣ ಅವರು ಹೇಳಿದ್ದಾರೆ. ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಪಂದ್ಯ ಆರಂಭ: ಸಂಜೆ 4.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.