ಐತಿಹಾಸಿಕ ಹಣಾಹಣಿಗೆ ಮೆಲ್ಬರ್ನ್ ಸಿದ್ಧ: ಇಂದು ಭಾರತ–ಪಾಕಿಸ್ತಾನ ಮುಖಾಮುಖಿ ಮೆಲ್ಬರ್ನ್: ‘ಇದನ್ನು ಪೈಪೋಟಿ ಎಂದು ಕರೆಯುವಂತಾಗಲು ನಾನು ಕೆಲವು ಪಂದ್ಯಗಳನ್ನು ಜಯಿಸಬೇಕು’– ಹಿಂದೊಮ್ಮೆ ಅಮೆರಿಕದ ಟೆನಿಸ್ ಆಟಗಾರ ಆ್ಯಂಡಿ ರಾಡಿಕ್ ಹಾರಿಸಿದ್ದ ನಗೆಚಟಾಕಿ ಇದು. ತಮ್ಮ ಹಾಗೂ ರೋಜರ್ ಫೆಡರರ್ ನಡುವೆ ‘ಪೈಪೋಟಿ’ ಇದೆ ಎಂದು ಬಿಂಬಿಸುವಂತಾಗುವುದರ ಕುರಿತು ಅವರು ಹೇಳಿದ್ದರು. ಅಂದು ತಮ್ಮನ್ನೇಹಾಸ್ಯಕ್ಕೊಡ್ಡಿಕೊಂಡ ಆ್ಯಂಡಿ, ಸ್ವಿಸ್‌ ತಾರೆ ರೋಜರ್ ಎದುರು ಆಡಿದ್ದ 24 ಪಂದ್ಯಗಳಲ್ಲಿ ಗೆದ್ದಿದ್ದು ಮೂರರಲ್ಲಿ ಮಾತ್ರ! ಕ್ರಿಕೆಟ್ ವಿಶ್ವಕಪ್‌ ಟೂರ್ನಿಗಳಲ್ಲಿ ಬಹುಚರ್ಚಿತವಾಗಿರುವ ಭಾರತ–ಪಾಕಿಸ್ತಾನ ‘ಪೈಪೋಟಿ’ಯ ಕುರಿತು ತದ್ವಿರುದ್ಧವಾದ ಮಾತು ಹೇಳಬಹುದು. ಸರಿಯಾಗಿ 12 ತಿಂಗಳುಗಳ ಹಿಂದಿವನರೆಗೂ ಭಾರತವು 50 ಓವರ್ ಹಾಗೂ 20 ಓವರ್‌ಗಳ ಮಾದರಿಗಳ ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ವಿರುದ್ಧ 12–0 ಜಯದ ದಾಖಲೆ ಹೊಂದಿತ್ತು. ಹೋದ ವರ್ಷ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಕ್ಟೋಬರ್ 24ರಂದು ಈ ಗೆಲುವಿನ ಸರಪಣಿ ಕಳಚಿಬಿತ್ತು. 13ನೇ ಮುಖಾಮುಖಿಯಲ್ಲಿ ಪಾಕಿಸ್ತಾನವು ಹತ್ತು ವಿಕೆಟ್‌ಗಳ ಜಯಸಾಧಿಸಿತ್ತು.ನಂತರದಲ್ಲಿ ಆ ಸೋಲಿನ ಸುತ್ತ ಅಭಿಮಾನಿಗಳ ಕಟುಟೀಕೆಗಳ ಅಲೆಗಳೆದ್ದಿದ್ದವು. ಇತ್ತೀಚೆಗಷ್ಟೇ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರೂ ಆಗಿರುವ ಜಯ್ ಶಾ ಅವರು, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್‌ಗೆ ಭಾರತ ತೆರಳುವುದಿಲ್ಲ. ತಟಸ್ಥ ತಾಣಕ್ಕೆ ಪಂದ್ಯ ಸ್ಥಳಾಂತರಿಸುವುದಾಗಿ ನೀಡಿರುವ ಹೇಳಿಕೆಯು ಈಗ ಚರ್ಚೆಗೆ ಗ್ರಾಸವಾಗಿದೆ. ಇದೇ ಸಂದರ್ಭದಲ್ಲಿ ನಡೆಯುತ್ತಿರುವ ಈ ಪಂದ್ಯ ಕುತೂಹಲ ಕೆರಳಿಸಿದೆ. ಇಂತಹ ಕಾವೇರಿದ ಪರಿಸ್ಥಿತಿಯಲ್ಲಿಯೂ ಪ್ರಬುದ್ಧ ನಾಯಕರು ಸಂಘರ್ಷದ ಬದಲು ‘ಇದು ಒಂದು ಪಂದ್ಯ ಮಾತ್ರ’ ಎಂಬ ನಿಲುವಿಗೆ ಬದ್ಧರಾಗಿದ್ದಾರೆ. ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮಳೆರಾಯ ಕೃಪೆ ತೋರಿದರೆ, ಹೊಸದೊಂದು ಅಧ್ಯಾಯ ಬರೆಯಲು ಉಭಯ ತಂಡಗಳು ಉತ್ಸುಕವಾಗಿವೆ. 2012ರ ಟಿ20 ವಿಶ್ವಕಪ್‌ ಟೂರ್ನಿಯಿಂದ ಈಚೆಗೆ ಪ್ರತಿ ಬಾರಿಯೂ ಲೀಗ್ ಹಂತದಲ್ಲಿ ಉಭಯ ತಂಡಗಳು ಲೀಗ್ ಹಂತದಲ್ಲಿ ಹಣಾಹಣಿ ನಡೆಸುವಂತೆ ನೋಡಿಕೊಳ್ಳುತ್ತಿದೆ. ಇದು ಲಾಭದಾಯಕ ಎಂಬುದು ಐಸಿಸಿಗೆ ಚೆನ್ನಾಗಿ ಗೊತ್ತಿದೆ. 2013ರಿಂದ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಆದರೆ ತಟಸ್ಥ ತಾಣಗಳಲ್ಲಿ ಸಿಕ್ಕ ಅವಕಾಶಗಳಲ್ಲಿಯೇ ಎರಡೂ ದೇಶಗಳ ಆಟಗಾರರು ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡಿದ್ದಾರೆ. ಹೊಸ ಸ್ನೇಹ ಬೆಳೆಸಿಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ವೈಫಲ್ಯ ಅನುಭವಿಸುತ್ತಿದ್ದ ವಿರಾಟ್ ಕೊಹ್ಲಿಗೆ ವಿಶ್ವಾಸ ತುಂಬುವಂತಹ ಟ್ವೀಟ್ ಸಂದೇಶವೊಂದನ್ನು ಪಾಕ್ ತಂಡದ ನಾಯಕ ಬಾಬರ್ ಆಜಂ ಹಾಕಿದ್ದರು. ಕಳೆದ ಅಗಸ್ಟ್‌ನಲ್ಲಿ ದುಬೈನಲ್ಲಿ ಗಾಯಗೊಂಡಿದ್ದ ಶಾಹೀನ್ ಶಾ ಆಫ್ರಿದಿ ಅವರ ಕುಶಲೋಪರಿ ವಿಚಾರಿಸಲು ವಿರಾಟ್ ತೆರಳಿದ್ದರು. ಏಷ್ಯಾದ ಎರಡು ದೈತ್ಯ ಕ್ರಿಕೆಟ್ ದೇಶಗಳಾಗಿರುವ ಭಾರತ ಮತ್ತು ಪಾಕ್ ವಿಶ್ವದ ಯಾವುದೇ ತಾಣದಲ್ಲಿ ಮುಖಾಮುಖಿಯಾದರೂ ದೇಶಭಕ್ತಿ ಉಕ್ಕುತ್ತದೆ. ಸೆಂಚುರಿಯನ್, ಕೊಲಂಬೊ, ಮ್ಯಾಂಚೆಸ್ಟರ್ ಅಥವಾ ಮೆಲ್ಬರ್ನ್ ಇರಲಿ ಇದೇ ವಾತಾವರಣವಿರುತ್ತದೆ. ಈಗ ಎಂಸಿಜಿಯೂ ಇದಕ್ಕೆ ಹೊರತಲ್ಲ. 90 ಸಾವಿರ ಪ್ರೇಕ್ಷಕರು ಸೇರಲಿರುವ ತಾಣದಲ್ಲಿ ಭಾರತ ಪರವಾದ ಭಾವನೆಗಳು ಪ್ರವಹಿಸುತ್ತಿವೆ. ತಮ್ಮ ನೆಚ್ಚಿನ ಆಟಗಾರರನ್ನು ಹುರಿದುಂಬಿ ಸುವ, ತಮ್ಮ ತಂಡದ ಗೆಲುವನ್ನು ಬಯಸುವುದು ಸ್ವಾಗತಾರ್ಹ. ಆದರೆ ಇಲ್ಲಿಯ ಫಲಿತಾಂಶವೇ ಸರ್ವಸ್ವವೂ ಅಲ್ಲ ಮತ್ತು ಅಂತ್ಯವೂ ಅಲ್ಲ. ಏಕೆಂದರೆ ಕ್ರೀಡೆಯ ಮೂಲ ಉದ್ದೇಶ ಒಡೆಯುವುದಲ್ಲ, ಮನಗಳನ್ನು ಬೆಸೆಯುವುದು. ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ಇಬ್ಬರೂ ವಿಕೆಟ್‌ಕೀಪರ್), ಯಜುವೇಂದ್ರ ಚಾಹಲ್, ದೀಪಕ್ ಹೂಡಾ. ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಶಾನ್ ಮಸೂದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹೈದರ್ ಅಲಿ, ಇಫ್ತಿಕಾರ್ ಅಹಮದ್, ಅಸಿಫ್ ಅಲಿ, ನಸೀಂ ಶಾಹ, ಹ್ಯಾರಿಸ್ ರವೂಫ್, ಶಾಹೀನ್ ಆಫ್ರಿದಿ, ಖುಷದಿಲ್ ಶಾಹ, ಮೊಹಮ್ಮದ್ ಹಸನೈನ್, ಮೊಹಮ್ಮದ್ ವಾಸೀಂ. ಜೂನಿಯರ್ ಫಖರ್ ಜಮಾನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.