ಆಸ್ಟ್ರೇಲಿಯಕ್ಕೆ ಐರ್ಲೆಂಡ್‌ ಸವಾಲು ಮೆಲ್ಬರ್ನ್‌ (ರಾಯಿಟರ್ಸ್‌): ಆತಿಥೇಯ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೋಮವಾರ ಐರ್ಲೆಂಡ್‌ ತಂಡದ ಸವಾಲು ಎದುರಿಸಲಿದೆ. ಇಂಗ್ಲೆಂಡ್‌ ತಂಡವನ್ನು ಮಣಿಸಿ ಅಚ್ಚರಿ ಮೂಡಿಸಿದ್ದ ಐರ್ಲೆಂಡ್‌ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್‌ ಫಿಂಚ್‌ ಹೇಳಿದ್ದಾರೆ. ‘ಐರ್ಲೆಂಡ್‌ ತಂಡ ಕೆಲವು ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅನುಭವಿಗಳಾಗಿದ್ದಾರೆ. ಆದ್ದರಿಂದ ಆ ತಂಡವನ್ನು ಕಡೆಗಣಿಸುವಂತಿಲ್ಲ’ ಎಂದು ಪಂದ್ಯದ ಮುನ್ನಾದಿನವಾದ ಭಾನುವಾರ ಅವರು ತಿಳಿಸಿದ್ದಾರೆ. ಮೂರು ಪಂದ್ಯಗಳಿಂದ ಅಷ್ಟೇ ಪಾಯಿಂಟ್ಸ್‌ ಹೊಂದಿರುವ ಆಸ್ಟ್ರೇಲಿಯಾ ತಂಡ ‘ಗುಂಪು 1’ ರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ಕೂಡಾ ಮೂರು ಪಾಯಿಂಟ್ಸ್‌ ಹೊಂದಿವೆ. ಆದರೆ ಆಸ್ಟ್ರೇಲಿಯಾದ ರನ್‌ ರೇಟ್‌ ಕಡಿಮೆ ಇರುವುದರಿಂದ ನಾಲ್ಕನೇ ಸ್ಥಾನದಲ್ಲಿದೆ. ಭಾನುವಾರದ ಪಂದ್ಯವನ್ನು ಗೆಲ್ಲುವ ಜತೆಯಲ್ಲಿ ರನ್‌ ರೇಟ್‌ ಹೆಚ್ಚಿಸಿಕೊಳ್ಳುವ ಸವಾಲು ಕೂಡಾ ಫಿಂಚ್‌ ಬಳಗದ ಮುಂದಿದೆ. ಆತಿಥೇಯ ತಂಡ ಒಂದು ಪಂದ್ಯವನ್ನು ಗೆದ್ದಿದ್ದು, ಒಂದರಲ್ಲಿ ಸೋಲು ಅನುಭವಿಸಿದೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದ್ದರಿಂದ ಸೆಮಿಫೈನಲ್‌ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಭಾನುವಾರ ಗೆಲುವು ಪಡೆಯಲೇಬೇಕು. ಪಂದ್ಯ ಆರಂಭ: ಮಧ್ಯಾಹ್ನ 1.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಹಾಟ್‌ಸ್ಟಾರ್‌ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.