T20 | ಮಳೆಯದ್ದೇ ಆಟ: ಆಸ್ಟ್ರೇಲಿಯಾ, ಇಂಗ್ಲೆಂಡ್‌ ಸೆಮಿ ಹಾದಿ ಕಠಿಣ ಮೆಲ್ಬರ್ನ್‌: ಭಾರಿ ಕುತೂಹಲಕ್ಕೆ ಮೂಡಿಸಿದ್ದ ಆಸ್ಟ್ರೇಲಿಯಾ– ಇಂಗ್ಲೆಂಡ್‌ ನಡುವಣ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ‘ಗುಂಪು–1’ ರ ಪಂದ್ಯ ಮಳೆಯಿಂದ ರದ್ದುಗೊಂಡಿತು. ಐರ್ಲೆಂಡ್‌– ಅಫ್ಗಾನಿಸ್ತಾನ ಪಂದ್ಯವೂ ಮಳೆಯಿಂದಾಗಿ ನಡೆಯಲಿಲ್ಲ. ಮೆಲ್ಬರ್ನ್‌ನಲ್ಲಿ ಶುಕ್ರವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ಮಳೆಯಿಂದ ರದ್ದಾಗಿರುವುದರಿಂದ ‘ಗುಂಪು–1’ ರಿಂದ ಸೆಮಿಫೈನಲ್‌ ಪ್ರವೇಶದ ಕನಸು ಕಂಡಿರುವ ತಂಡಗಳ ಹಾದಿ ಮತ್ತಷ್ಟು ಕಠಿಣವಾಗಿದೆ. ಎರಡು ಪಂದ್ಯಗಳಿಂದ ಮೂರು ಪಾಯಿಂಟ್ಸ್‌ ಹೊಂದಿರುವ ನ್ಯೂಜಿಲೆಂಡ್‌ ತಂಡ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್‌ ತಂಡಗಳು ಮೂರು ಪಂದ್ಯಗಳಿಂದ ಮೂರು ಪಾಯಿಂಟ್ಸ್‌ ಹೊಂದಿದೆ. ಉತ್ತಮ ರನ್‌ರೇಟ್‌ ಇರುವುದರಿಂದ ಇಂಗ್ಲೆಂಡ್‌ ಎರಡನೇ ಸ್ಥಾನದಲ್ಲಿದ್ದರೆ, ಐರ್ಲೆಂಡ್‌ ಮೂರನೇ ಸ್ಥಾನದಲ್ಲಿದೆ. ಆತಿಥೇಯ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದ್ದು, ಸೆಮಿಫೈನಲ್‌ ಪ್ರವೇಶಿಸಲು ಭಾರಿ ಕಸರತ್ತು ನಡೆಸಬೇಕಾದ ಅನಿವಾರ್ಯತೆ ಒದಗಿದೆ. ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡ ತಂಡದ ಮೇಲಿದೆ. ಇನ್ನೊಂದು ಪಂದ್ಯ ಮಳೆಯಿಂದ ರದ್ದಾದರೆ, ಸೆಮಿ ಪ್ರವೇಶದ ಸಾಧ್ಯತೆ ಕ್ಷೀಣಿಸಲಿದೆ. ತಲಾ ಒಂದು ಗೆಲುವು ಮತ್ತು ಸೋಲು ಅನುಭವಿಸಿರುವ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳು ಶುಕ್ರವಾರ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದವು. ಇದರಿಂದ ರೋಚಕ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ಮಳೆ ಅದಕ್ಕೆ ಅವಕಾಶ ನೀಡಲಿಲ್ಲ. ಪ್ರತಿ ಗುಂಪಿನಿಂದ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿ ಪ್ರವೇಶಿಸಲಿವೆ. ‘ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮುಂದೆ ಪಂದ್ಯ ನಡೆಯಬೇಕಿತ್ತು. ವೃತ್ತಿಜೀವನದ ಬಲುದೊಡ್ಡ ಪಂದ್ಯ ಆಡಲು ಸಾಧ್ಯವಾಗದಿರುವುದು ನಿರಾಸೆ ಮೂಡಿಸಿದೆ. ಮುಂದಿನ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿ, ಸೆಮಿ ಪ್ರವೇಶದ ಕನಸನ್ನು ಜೀವಂತವಾಗಿಟ್ಟುಕೊಳ್ಳುವುದು ನಮ್ಮ ಗುರಿ’ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಪ್ರತಿಕ್ರಿಯಿಸಿದ್ದಾರೆ. ಐರ್ಲೆಂಡ್‌ಗೆ ನಿರಾಸೆ: ಅಫ್ಗಾನಿಸ್ತಾನದ ಎದುರಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದಕ್ಕೆ ಐರ್ಲೆಂಡ್‌ ತಂಡದ ನಾಯಕ ಆ್ಯಂಡ್ರ್ಯೂ ಬಲ್ಬಿರ್ನಿ ನಿರಾಸೆ ವ್ಯಕ್ತ‍‍ಪಡಿಸಿದರು. ಐರ್ಲೆಂಡ್‌ ತನ್ನ ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಆಘಾತ ನೀಡಿತ್ತು. ‘ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದೆವು. ಅಫ್ಗಾನಿಸ್ತಾನ ತಂಡದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡಿದ್ದೆವು. ಪಂದ್ಯ ನಡೆಯದ್ದು ಬೇಸರ ಉಂಟುಮಾಡಿದೆ’ ಎಂದು ಹೇಳಿದರು. ಅಫ್ಗನ್‌ ತಂಡದ ನಾಯಕ ಮೊಹಮ್ಮದ್ ನಬಿ ಅವರೂ ನಿರಾಸೆ ವ್ಯಕ್ತಪಡಿಸಿದರು. ‘ನಾವು ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದೆವು. ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಸಾಕಷ್ಟು ಪಾಠಗಳನ್ನು ಕಲಿತುಕೊಂಡಿದ್ದೇವೆ. ತಪ್ಪುಗಳನ್ನು ತಿದ್ದಿಕೊಳ್ಳಲು ಪರಿಶ್ರಮ ಪಟ್ಟಿದ್ದೇವೆ. ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಲು ಮಳೆ ಅವಕಾಶ ನೀಡಲಿಲ್ಲ’ ಎಂದರು. ಅಫ್ಗನ್‌ ತಂಡದ ಎರಡು ಪಂದ್ಯಗಳು ಸೇರಿದಂತೆ ಈ ಟೂರ್ನಿಯಲ್ಲಿ ಇದುವರೆಗೆ ಒಟ್ಟು ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿವೆ. ತಲಾ ಎರಡು ಪಾಯಿಂಟ್ಸ್‌ ಹೊಂದಿರುವ ಶ್ರೀಲಂಕಾ ಮತ್ತು ಅಫ್ಗಾನಿಸ್ತಾನ ತಂಡಗಳು ‘ಗುಂ‍ಪು 1’ ರಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.