T20 | ಡಕ್ವರ್ತ್ ಲೂಯಿಸ್ ನಿಯಮ: ಇಂಗ್ಲೆಂಡ್‌ಗೆ ಐರ್ಲೆಂಡ್ ಆಘಾತ ಮೆಲ್ಬರ್ನ್: ನಾಯಕ ಆ್ಯಂಡ್ರ್ಯೂ ಬಲ್ಬಿರ್ನಿ ಅಮೋಘ ಅರ್ಧಶತಕದ ಬಲದಿಂದ ಐರ್ಲೆಂಡ್ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರಲ್ಲಿ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿತು. ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಒಂದನೇ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ತಂಡವು 5 ರನ್‌ಗಳಿಂದ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 19.2 ಓವರ್‌ಗಳಲ್ಲಿ 157 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 14.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 105 ರನ್‌ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಆರಂಭವಾಯಿತು. ಆದರೆ ಪಂದ್ಯ ಪುನರಾರಂಭವಾಗಬೇಕಾದ ಕಾಲಮಿತಿಯೊಳಗೆ ಮಳೆ ನಿಲ್ಲಲಿಲ್ಲ. ಅದರಿಂದಾಗಿ ಡಕ್ವರ್ಥ್‌–ಲೂಯಿಸ್ ನಿಯಮವನ್ನು ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಇಂಗ್ಲೆಂಡ್ 14.3 ಓವರ್‌ಗಳಲ್ಲಿ 110 ರನ್‌ ಗಳಿಸಬೇಕಿತ್ತು. ಆದರೆ ಐದು ರನ್‌ಗಳ ಹಿನ್ನಡೆಯಾದ ಕಾರಣ ಗೆಲುವು ಐರ್ಲೆಂಡ್ ಮಡಿಲಿಗೆ ಬಿತ್ತು. 2011ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿಯೂ ಇಂಗ್ಲೆಂಡ್ ವಿರುದ್ಧ ಜಯಿಸಿತ್ತು. ಆಗ ಕೆವಿನ್ ಒ ಬ್ರೇನ್ ಮಿಂಚಿದ್ದರು. ಇಲ್ಲಿ ಆ್ಯಂಡ್ರ್ಯೂ ಬಲ್ಬಿರ್ನಿ (62; 47ಎ, 4X5, 6X2) ಅವರ ಆಟ ತಂಡಕ್ಕೆ ನೆರವಾಯಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ (17ಕ್ಕೆ3) ಹಾಗೂ ಮಾರ್ಕ್ ವುಡ್ (34ಕ್ಕೆ3) ಐರ್ಲೆಂಡ್ ತಂಡವು ದೊಡ್ಡ ಮೊತ್ತ ಗಳಿಸದಂತೆ ತಡೆಯೊಡ್ಡಿದರು. ಇಂಗ್ಲೆಂಡ್ ತಂಡವು ಬ್ಯಾಟಿಂಗ್‌ನಲ್ಲಿ ಡೇವಿಡ್ ಮಲಾನ್ (35; 37ಎ) ಹಾಗೂ ಮೋಯಿನ್ ಅಲಿ (ಔಟಾಗದೆ 24; 12ಎ) ಬಿಟ್ಟರೆ ಉಳಿದವರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.ಐರ್ಲೆಂಡ್‌ನ ಜೋಶುವಾ ಲಿಟಲ್ (16ಕ್ಕೆ2) ಇಂಗ್ಲೆಂಡ್ ತಂಡಕ್ಕೆ ಕಠಿಣ ಸವಾಲೊಡ್ಡಿದರು. ಸಂಕ್ಷಿಪ್ತ ಸ್ಕೋರು 1ನೇ ಗುಂಪು: ಐರ್ಲೆಂಡ್: 19.2 ಓವರ್‌ಗಳಲ್ಲಿ 157 (ಆ್ಯಂಡ್ರ್ಯೂ ಬಲ್ಬಿರ್ನಿ 62, ಲಾರ್ಕೆನ್ ಟಕರ್ 34, ಕರ್ಟಿಸ್ ಕ್ಯಾಂಪರ್ 18, ಮಾರ್ಕ್ ವುಡ್ 34ಕ್ಕೆ3, ಸ್ಯಾಮ್ ಕರನ್ 31ಕ್ಕೆ2, ಲಿಯಮ್ ಲಿವಿಂಗ್‌ಸ್ಟೋನ್ 17ಕ್ಕೆ3) ಇಂಗ್ಲೆಂಡ್: 14.3 ಓವರ್‌ಗಳಲ್ಲಿ 5ಕ್ಕೆ 105 (ಡೇವಿಡ್ ಮಲಾನ್ 35, ಹ್ಯಾರಿ ಬ್ರೂಕ್ 18, ಮೋಯಿನ್ ಅಲಿ ಔಟಾಗದೆ 24, ಜೊಶುವಾ ಲಿಲಟ್ 16ಕ್ಕೆ2) ಫಲಿತಾಂಶ: ಐರ್ಲೆಂಡ್‌ಗೆ 5 ರನ್‌ಗಳ ಜಯ (ಡಕ್ವರ್ಥ್‌–ಲೂಯಿಸ್ ಪದ್ಧತಿಯಲ್ಲಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.