T20 : ಸೆಮಿಫೈನಲ್ ರೇಸ್‌ನಲ್ಲಿ ಆಸೀಸ್, ಕಿವೀಸ್, ಆಂಗ್ಲರ ಪಡೆ ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್ ರೋಚಕ ಹಂತವನ್ನು ತಲುಪಿದೆ. 'ಸೂಪರ್ 12' ಪಂದ್ಯಗಳು ಕೊನೆಯ ಹಂತವನ್ನು ತಲುಪಿರುವಂತೆಯೇ ಯಾವೆಲ್ಲ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ ಎಂಬುದು ಇನ್ನೂ ನಿರ್ಧಾರವಾಗದಿರುವುದು ಕುತೂಹಲವನ್ನು ಹೆಚ್ಚಿಸಿದೆ. 'ಎ' ಗುಂಪಿನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ತಲಾ ನಾಲ್ಕು ಪಂದ್ಯಗಳಲ್ಲಿ ಸಮಾನ ಐದು ಅಂಕಗಳನ್ನು ಕಾಪಾಡಿಕೊಂಡಿದೆ. ರನ್ ರೇಟ್ ಆಧಾರದಲ್ಲಿ ಕಿವೀಸ್ ಅಗ್ರಸ್ಥಾನದಲ್ಲಿದ್ದು (+2.233), ಇಂಗ್ಲೆಂಡ್ (+0.547) ಹಾಗೂ ಆತಿಥೇಯ ಆಸ್ಟ್ರೇಲಿಯಾ (-0.304) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಈ ಪೈಕಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ನೆಗೆರೇಟ್ ರನ್‌ರೇಟ್ ಹೊಂದಿದ್ದು, ಹಿನ್ನಡೆಯಾಗಿ ಪರಿಣಮಿಸಿದೆ. ಈ ಎಲ್ಲ ತಂಡಗಳಿಗೆ ತಲಾ ಒಂದು ಪಂದ್ಯಗಳು ಬಾಕಿ ಉಳಿದಿವೆ. ಸೆಮಿಫೈನಲ್ ಪ್ರವೇಶ ಜೀವಂತವಾಗಿರಿಸಲು ಆಸ್ಟ್ರೇಲಿಯಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಅಫ್ಗಾನಿಸ್ತಾನದ ವಿರುದ್ಧ ಬೃಹತ್ ಗೆಲುವು ದಾಖಲಿಸುವ ಅಗತ್ಯವಿದೆ. ಅತ್ತ ಐರ್ಲೆಂಡ್ ತಂಡವನ್ನು ನ್ಯೂಜಿಲೆಂಡ್ ಮತ್ತು ಶ್ರೀಲಂಕಾದ ಸವಾಲನ್ನು ಇಂಗ್ಲೆಂಡ್ ಎದುರಿಸಲಿದೆ. ಇತ್ತಂಡಗಳಿಗೂ ಈ ಪಂದ್ಯ ನಿರ್ಣಾಯಕವೆನಿಸಿದೆ. ಇನ್ನು ಈ ಗುಂಪಿನಿಂದ ಐರ್ಲೆಂಡ್, ಅಫ್ಗಾನಿಸ್ತಾನ ತಂಡಗಳು ಈಗಾಗಲೇ ನಿರ್ಗಮಿಸಿದ್ದು, ಶ್ರೀಲಂಕಾದ ಹಾದಿ ದುರ್ಗಮವೆನಿಸಿದೆ. 'ಬಿ' ಗುಂಪಿನಲ್ಲಿ ಅಜೇಯ ಓಟ ಮುಂದುವರಿಸಿರುವ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುವ ನೆಚ್ಚಿನ ತಂಡವೆನಿಸಿದೆ. ಭಾರತದ ವಿರುದ್ಧದ ಗೆಲುವು ದಕ್ಷಿಣ ಆಫ್ರಿಕಾದ ಹುಮ್ಮಸ್ಸನ್ನು (ರನ್ ರೇಟ್ - +2.772) ಹೆಚ್ಚಿಸಿದೆ. ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಒಟ್ಟು ಐದು ಅಂಕ ಗಳಿಸಿದೆ. ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ, ನಾಲ್ಕು ಪಂದ್ಯಗಳಲ್ಲಿ ಅಷ್ಟೇ ಅಂಕಗಳನ್ನು ಗಳಿಸಿದೆ. ಅಲ್ಲದೆ ಮೂರನೇ ಸ್ಥಾನದಲ್ಲಿರುವ ಬಾಂಗ್ಲಾದೇಶಕ್ಕಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಂಡಿದೆ. ಭಾರತ +0.844 ಹಾಗೂ ಬಾಂಗ್ಲಾ -1.533 ರನ್ ರೇಟ್ ಹೊಂದಿದೆ. ಹಾಗಾಗಿ ಇಂದು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಪಂದ್ಯವು ಭಾರತದ ಪಾಲಿಗೆ ಮಹತ್ವೆನಿಸಿದೆ. ಭಾರತ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಭಾನುವಾರ ಜಿಂಬಾಬ್ವೆಯ ಸವಾಲನ್ನು ಎದುರಿಸಲಿದೆ. ಇದೇ ಗುಂಪಿನಲ್ಲಿರುವ ಪಾಕಿಸ್ತಾನ, ಜಿಂಬಾಬ್ವೆ ಪಾಲಿಗೂ ಉಳಿದಿರುವ ಎರಡು ಪಂದ್ಯಗಳು ನಿರ್ಣಾಯಕವೆನಿಸಿವೆ. ಅತ್ತ ನೆದರ್ಲೆಂಡ್ ತಂಡವು ನಿರ್ಗಮನದ ಹಾದಿ ಹಿಡಿದಿದೆ. ಪಾಕಿಸ್ತಾನ ತಂಡವು ಅಂತಿಮ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸವಾಲನ್ನು ಎದುರಿಸಲಿದೆ. ಪಂದ್ಯ ಸಂಖ್ಯೆ 33ರ ಅಂತ್ಯಕ್ಕೆ ಅಂಕಪಟ್ಟಿ ಇಂತಿದೆ: ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.