ಟಿ20 ವಿಶ್ವಕಪ್‌: ವಿಲಿಯಮ್ಸನ್‌ ಮಿಂಚು, ಸೆಮಿಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್ ಅಡಿಲೇಡ್‌: ನ್ಯೂಜಿಲೆಂಡ್‌ ತಂಡ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದ ಮೊದಲ ತಂಡ ಎನಿಸಿಕೊಂಡಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್‌ ಬಳಗ 35 ರನ್‌ಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿತು. ಈ ಮೂಲಕ ಐದು ಪಂದ್ಯಗಳಿಂದ ಏಳು ಪಾಯಿಂಟ್ಸ್‌ ಗಳಿಸಿ ತನ್ನ ಲೀಗ್‌ ವ್ಯವಹಾರ ಕೊನೆಗೊಳಿಸಿತು. ಆಸ್ಟ್ರೇಲಿಯಾ ಕೂಡಾ ಏಳು ಪಾಯಿಂಟ್ಸ್‌ ಹೊಂದಿದೆ. ಆದರೆ ಉತ್ತಮ ರನ್‌ರೇಟ್‌ ಹೊಂದಿರುವುದರಿಂದ ನ್ಯೂಜಿಲೆಂಡ್‌ ತಂಡ ‘ಗುಂಪು 1’ ರಲ್ಲಿ ಅಗ್ರಸ್ಥಾನ ಪಡೆದು ನಾಲ್ಕರಘಟ್ಟ ಪ್ರವೇಶಿಸಿತು. ವಿಲಿಯಮ್ಸನ್‌ ಮಿಂಚು: ಅಡಿಲೇಡ್‌ ಓವಲ್‌ನಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್‌, ವಿಲಿಯಮ್ಸನ್‌ (61 ರನ್‌, 35 ಎ., 4X5, 6X3) ಅವರ ಬಿರುಸಿನ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 ರನ್‌ ಪೇರಿಸಿತು. ದಿಟ್ಟ ಹೋರಾಟ ನಡೆಸಿದರೂ ಐರ್ಲೆಂಡ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 150 ರನ್‌ ಮಾತ್ರ ಗಳಿಸಿತು. ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಫಿನ್‌ ಅಲೆನ್‌ (32 ರನ್‌, 18 ಎ.) ಮತ್ತು ಡೆವೊನ್‌ ಕಾನ್ವೆ (28) ಮೊದಲ ವಿಕೆಟ್‌ಗೆ 52 ರನ್‌ ಸೇರಿಸಿ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ಒದಗಿಸಿಕೊಟ್ಟರು. ಭದ್ರ ಬುನಾದಿಯ ಮೇಲೆ ವಿಲಿಯಮ್ಸನ್‌ ಇನಿಂಗ್ಸ್‌ ಬೆಳೆಸಿದರು. ಡೆರಿಲ್‌ ಮಿಚೆಲ್‌ (ಔಟಾಗದೆ 31, 21 ಎ.) ಜತೆ ನಾಲ್ಕನೇ ವಿಕೆಟ್‌ಗೆ 60 ರನ್‌ ಕಲೆಹಾಕಿದ್ದರಿಂದ ತಂಡ ಸವಾಲಿನ ಮೊತ್ತ ಪೇರಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಪರದಾಡಿದ್ದ ವಿಲಿಯಮ್ಸನ್‌ ಸೂಕ್ತ ಸಮಯದಲ್ಲಿ ಫಾರ್ಮ್‌ ಕಂಡುಕೊಂಡರು. ಉತ್ತಮ ಆರಂಭ: ಐರ್ಲೆಂಡ್‌ ತಂಡದ ಪಾಲ್‌ ಸ್ಟರ್ಲಿಂಗ್‌ (37 ರನ್‌, 27ಎ.) ಮತ್ತು ಆ್ಯಂಡಿ ಬಲ್ಬಿರ್ನಿ (30 ರನ್‌, 25 ಎ.) ಮೊದಲ ವಿಕೆಟ್‌ಗೆ 68 ರನ್‌ ಸೇರಿಸಿ ನ್ಯೂಜಿಲೆಂಡ್‌ ಆಟಗಾರರಲ್ಲಿ ಆತಂಕ ಮೂಡಿಸಿದ್ದರು. ಬಲ್ಬಿರ್ನಿ ಅವರನ್ನು ಬೌಲ್ಡ್‌ ಮಾಡಿದ ಮಿಚೆಲ್‌ ಸ್ಯಾಂಟ್ನೆರ್‌ ಈ ಜತೆಯಾಟ ಮುರಿದ ಬಳಿಕ ನ್ಯೂಜಿಲೆಂಡ್‌ ಬೌಲರ್‌ಗಳು ಹಿಡಿತ ಸಾಧಿಸಿದರು. 22 ರನ್‌ಗಳಿಗೆ ಮೂರು ವಿಕೆಟ್‌ ಪಡೆದ ಲೋಕಿ ಫರ್ಗ್ಯುಸನ್‌ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಕೊಟ್ಟರು. ಐದು ಪಂದ್ಯಗಳಿಂದ ಮೂರು ಪಾಯಿಂಟ್ಸ್‌ಗಳೊಂದಿಗೆ ಐರ್ಲೆಂಡ್‌ ತನ್ನ ಅಭಿಯಾನ ಕೊನೆಗೊಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.