ಏಷ್ಯಾ ಕಪ್ ಕ್ರಿಕೆಟ್: ಕ್ರೀಸ್‌ಗೆ ಬಂದಾಗ ಆತಂಕದಲ್ಲಿದ್ದೆ- ರಾಹುಲ್ ಕೊಲಂಬೊ: ಗಾಯದಿಂದಾಗಿ ಸುದೀರ್ಘ ಸಮಯದವರೆಗೆ ವಿಶ್ರಾಂತಿಯಲ್ಲಿದ್ದ ಕೆ.ಎಲ್. ರಾಹುಲ್ ತಾವು ಮರಳಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿಯೇ ಶತಕ ದಾಖಲಿಸಿದರು. ಆದರೆ, ತಾವು ಕ್ರೀಸ್‌ಗೆ ಬಂದ ಆರಂಭದಲ್ಲಿ ತುಸು ಆತಂಕವಾಗಿದ್ದನ್ನು ರಾಹುಲ್ ಹೇಳಿದ್ದಾರೆ. ಸೋಮವಾರ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಕನ್ನಡಿಗ ರಾಹುಲ್ ಶತಕ (111; 106ಎ) ದಾಖಲಿಸಿದರು. ಭಾರತ ತಂಡವು 228 ರನ್‌ಗಳಿಂದ ಜಯಿಸಿತು. ಪಂದ್ಯದ ನಂತರ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾತನಾಡಿದ ಅವರು, ‘ಬಹಳ ಸಮಯದ ನಂತರ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಿದೆ. ಇಲ್ಲಿಗೆ ಬರುವ ಮುನ್ನ ಕೆಲವು ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದೆ. ಆದರೆ, ಆ ಪಂದ್ಯಗಳಿಗೂ ಮತ್ತು ಇಲ್ಲಿ ನಡೆದ ಹಣಾಹಣಿಯ ನಡುವೆ ಬಹಳ ವ್ಯತ್ಯಾಸವಿರುತ್ತವೆ. ಆದ್ದರಿಂದ ನಾನು ಕ್ರೀಸ್‌ಗೆ ಬಂದಾಗ ಸ್ವಲ್ಪ ಅಧೀರನಾಗಿದ್ದೆ‘ ಎಂದರು. ‘ಭಾನುವಾರ ನಾನು ಕ್ರೀಸ್‌ಗೆ ಬಂದು ಲಯ ಕಂಡುಕೊಳ್ಳುವಷ್ಟರಲ್ಲಿ ಮಳೆ ಆರಂಭವಾಯಿತು. ಸೋಮವಾರಕ್ಕೆ ಮುಂದೂಡಲಾಯಿತು. ಮತ್ತೊಮ್ಮೆ ಲಯ ಕಂಡುಕೊಳ್ಳಲು ಪ್ರಯತ್ನಿಸಬೇಕಾಯಿತು. 10–15 ಎಸೆತಗಳನ್ನು ಆಡುವಷ್ಟರಲ್ಲಿ ಲಯ ಲಭಿಸಿತು‘ ಎಂದರು. ಹೋದ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ರಾಹುಲ್ ತೊಡೆಯ ಗಾಯದಿಂದ ಬಳಲಿದ್ದರು. ಶಸ್ತ್ರಚಿಕಿತ್ಸೆ ನೀಡಲಾಗಿತ್ತು. ಅದರ ನಂತರ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಪಂದ್ಯದಲ್ಲಿ ಮೂರನೇ ವಿಕೆಟ್ ಜೊತೆಯಾಟದಲ್ಲಿ ರಾಹುಲ್ ಅವರು ವಿರಾಟ್ ಕೊಹ್ಲಿ ಜೊತೆಗೆ 233 ರನ್‌ ಸೇರಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್, ‘ವಿರಾಟ್ 13 ಸಾವಿರಕ್ಕಿಂತಲೂ ಹೆಚ್ಚು ರನ್‌ ಗಳಿಸಿರುವ ಆಟಗಾರ. ಅವರೊಬ್ಬ ಅದ್ಭುತ ಆಟಗಾರ. ಅವರ ಹಿರಿಮೆಯನ್ನು ಬಣ್ನಿಸಲು ಪದಕಗಳ ಕೊರತೆ ಕಾಡುವುದು ಸಹಜ. ಅವರೊಂದಿಗೆ ಆಡುವುದು ಯಾವಾಗಲೂ ಅಪ್ಯಾಯಮಾನವಾದದ್ದು‘ ಎಂದರು. ಶ್ರೇಯಸ್ ಅಯ್ಯರ್‌ಗೆ ಗಾಯ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಬೆನ್ನಿನ ಸೆಳೆತದಿಂದಾಗಿ ಶ್ರೀಲಂಕಾ ಎದುರಿನ ಪಂದ್ಯಕ್ಕೆ ಅಲಭ್ಯರಾದರು. ಆರು ತಿಂಗಳುಗಳ ಹಿಂದೆ ಅವರು ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅದರಿಂದಾಗಿ ದೀರ್ಘಕಾಲ ಆಟದಿಂದ ದೂರ ಉಳಿದಿದ್ದರು. ಏಷ್ಯಾ ಕಪ್ ಗುಂಪು ಹಂತದಲ್ಲಿ ಪಂದ್ಯದಲ್ಲಿ ಅವರು ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.