ಕೊನೆಯ ಓವರುಗಳು ನಿರಾಶಾದಾಯಕವಾದವು: ದಕ್ಷಿಣ ಆಫ್ರಿಕಾ ಕೋಚ್‌ ಬೇಸರ ಧರ್ಮಶಾಲಾ: ನೆದರ್ಲೆಂಡ್ಸ್‌ ವಿರುದ್ಧ ಕೊನೆಯ ಕೆಲವು ಓವರುಗಳು ನಿರಾಶಾದಾಯಕ ರೀತಿಯಲ್ಲಿದ್ದುದು ಮತ್ತು ಬ್ಯಾಟಿಂಗ್‌ನಲ್ಲಿ ಕಳಪೆ ಆರಂಭ ಮಾಡಿದ್ದೇ ಸೋಲಿಗೆ ಕಾರಣವಾಯಿತು ಎಂದು ದಕ್ಷಿಣ ಆಫ್ರಿಕಾ ಕೋಚ್‌ ರಾಬ್ ವಾಲ್ಟರ್ ಹೊಣೆ ಮಾಡಿದ್ದಾರೆ. ಮಂಗಳವಾರ, ಮಳೆಯಿಂದಾಗಿ ತಲಾ 43 ಓವರುಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲು ಆಡಿದ ನೆದರ್ಲೆಂಡ್ಸ್‌ ತಂಡ ಒಂದು ಹಂತದಲ್ಲಿ 7 ವಿಕೆಟ್‌ಗೆ 140 ರನ್ ಗಳಿಸಿ ಇಕ್ಕಟ್ಟಿನಲ್ಲಿತ್ತು. ಆದರೆ ಅಂತಿಮವಾಗಿ ಆ ಮೊತ್ತ 8 ವಿಕೆಟ್‌ಗೆ 245 ರನ್‌ಗಳಿಗೆ ಬೆಳೆಯಿತು. ದಕ್ಷಿಣ ಆಫ್ರಿಕಾ ಒಂದು ಎಸೆತ ಇರುವಂತೆ 207 ರನ್‌ಗಳಿಗೆ ಮಗುಚಿ 38 ರನ್‌ಗಳಿಂದ ಆಘಾತ ಕಂಡಿತ್ತು. ಇದು ಟೆಸ್ಟ್‌ ಆಡುವ ದೇಶವೊಂದರ ವಿರುದ್ಧ ಡಚ್ಚರು ಗಳಿಸಿದ ಮೊದಲ ಜಯ. ಜೊತೆಗೆ ಈ ಟೂರ್ನಿಯ ಎರಡನೇ ಅಚ್ಚರಿಯ ಫಲಿತಾಂಶವಾಗಿ ದಾಖಲಾಯಿತು. ಭಾನುವಾರ, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 69 ರನ್‌ಗಳಿಂದ ಅಫ್ಗಾನಿಸ್ತಾನಕ್ಕೆ ಶರಣಾಗಿತ್ತು. ‘ಎದುರಾಳಿ ತಂಡದ ಏಳು ವಿಕೆಟ್‌ಗಳನ್ನು 140 ರನ್ನಿಗೆ ಪಡೆದಾಗ ಪಂದ್ಯ ನಮ್ಮ ಕೈಲಿತ್ತು. ಆದರೆ ಅವರ ಇನಿಂಗ್ಸ್‌ ಬೇಗನೇ ಮುಗಿಸಲು ನಮಗೆ ಆಗಲಿಲ್ಲ. ಆಗಲೇ ಬಿಗಿ ಹಿಡಿತ ಕಳೆದುಕೊಂಡೆವು. ಇಂಥ ಮೊತ್ತ ಬೆನ್ನಟ್ಟುವಾಗ ಉತ್ತಮ ಆರಂಭ ಬೇಕಿತ್ತು. ಆದರೆ ಕೆಟ್ಟ ಆರಂಭದಿಂದ ನಾವು ಒತ್ತಡಕ್ಕೆ ಒಳಗಾದೆವು’ ಎಂದು ನಿರಾಶೆ ವ್ಯಕ್ತಪಡಿಸಿದರು. ಈ ಎರಡು ಅನಿರೀಕ್ಷಿತ ಫಲಿತಾಂಶಗಳಿಂದಾಗಿ ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬುದನ್ನು ಈ ಎರಡು ಅನಿರೀಕ್ಷಿತ ಫಲಿತಾಂಶಗಳು ತೋರಿಸಿಕೊಟ್ಟಿವೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.