T20 : ಜಿಂಬಾಬ್ವೆ ಎದುರು ಗೆದ್ದ ಭಾರತ: ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಸವಾಲು ಮೆಲ್ಬರ್ನ್‌: ಐಸಿಸಿ ಟಿ20 ವಿಶ್ವಕಪ್‌ ಸರಣಿಯ ಸೂಪರ್ 12ರ ಎರಡನೇ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಭಾರತ ಮೊದಲು ಬ್ಯಾಟ್‌ ಮಾಡಿ, 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿತ್ತು. ಈ ಮೂಲಕ ಜಿಂಬಾಬ್ವೆಗೆ ಸವಾಲಿನ ಮೊತ್ತದ ಗುರಿ ನೀಡಿತ್ತು. ಇದನ್ನು ಬೆನ್ನು ಹತ್ತಿದ ಜಿಂಬಾಬ್ವೆ 17.2 ಓವರ್‌ಗಳಲ್ಲಿ ಸರ್ವಪತನ ಕಂಡು ಕೇವಲ 115 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 71 ರನ್‌ಗಳ ಜಯ ದಾಖಲಿಸಿದೆ. ಇದನ್ನೂ ಓದಿ:T20 ಸೆಮಿಫೈನಲ್ಸ್: ಯಾರಿಗೆ ಯಾರು ಎದುರಾಳಿ ಯಾರು? ಜಿಂಬಾಬ್ವೆ ಪರ ಸಿಖಂದರ್‌ ರಾಜಾ 34 (24), ಬರ್ಲ್‌ 35(22) ಹೊರತುಪಡಿಸಿದರೆ ಬೇರೆ ಯಾವ ಆಟಗಾರರಿಂದಲೂ ಉತ್ತಮ ಆಟ ಮೂಡಿ ಬರಲೇ ಇಲ್ಲ. ಭಾರತದ ಪರ ರವಿಚಂದ್ರನ್‌ ಅಶ್ವಿನ್‌ 3 ವಿಕೆಟ್‌ ಪಡೆದರೆ, ಮೊಹಮದ್‌ ಶಮಿ ಮತ್ತು ಹರ್ದಿಕ್‌ ಪಂಡ್ಯಾ ತಲಾ ಎರಡು ವಿಕೆಟ್‌ ಪಡೆದರು. ಸೂಪರ್ 12ರ ಎರಡನೇ ಗುಂಪಿನಲ್ಲಿ ಭಾರತ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ಅನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.