ವಿರಾಟ್‌ ಕೊಹ್ಲಿ ತಿಂಗಳ ಆಟಗಾರ: ಐಸಿಸಿ ಗೌರವ ದುಬೈ: ಟಿ20ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಸೆಮಿಫೈನಲ್‌ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬ್ಯಾಟರ್‌ ವಿರಾಟ್ ಕೊಹ್ಲಿ ಅವರುಐಸಿಸಿ ನೀಡುವ ಅಕ್ಟೋಬರ್ ತಿಂಗಳ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್‌ ನಿದಾ ದಾರ್ ಅವರಿಗೆ ಮಹಿಳೆಯರ ವಿಭಾಗದಲ್ಲಿ ಈ ಗೌರವ ಒಲಿದಿದೆ. ಏಷ್ಯಾಕಪ್‌ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ ಹಿನ್ನೆಲೆಯಲ್ಲಿ ನಿದಾ ಅವರಿಗೆ ಪ್ರಶಸ್ತಿ ಸಂದಿದೆ. ಮಾಧ್ಯಮ ಪ್ರತಿನಿಧಿಗಳು, ಐಸಿಸಿ ಹಾಲ್ ಆಫ್ ಫೇಮರ್ಸ್, ಮಾಜಿ ಅಂತರರಾಷ್ಟ್ರೀಯ ಆಟಗಾರರು ಮತ್ತು ನೋಂದಾಯಿತ ಅಭಿಮಾನಿಗಳು ಕೊಹ್ಲಿ ಮತ್ತು ನಿದಾ ಆಯ್ಕೆಗೆ ಮತ ಹಾಕಿದ್ದಾರೆ. ವಿರಾಟ್‌ ಅವರಿಗೆ ಇದು ಮೊದಲ ‘ತಿಂಗಳ ಆಟಗಾರ’ ಗೌರವವಾಗಿದೆ. ಅಕ್ಟೋಬರ್‌ನಲ್ಲಿ ಅವರು ಒಟ್ಟು 205 ರನ್ ಗಳಿಸಿದ್ದಾರೆ. ವಿಶ್ವಕಪ್‌ ಟೂರ್ನಿಯಲ್ಲಿ ನೆದರ್ಲೆಂಡ್ಸ್ ಎದುರಿನ ಪಂದ್ಯದಲ್ಲಿ ಗಳಿಸಿದ ಸುಂದರ ಅರ್ಧಶತಕವೂ ಅಲ್ಲದೆ ಪಾಕಿಸ್ತಾನ ಎದುರಿನ ಸ್ಮರಣೀಯ ಇನಿಂಗ್ಸ್ (82, 53 ಎ) ಇದರಲ್ಲಿ ಸೇರಿವೆ. ತಿಂಗಳ ಆಟಗಾರ ಸ್ಪರ್ಧೆಯಲ್ಲಿ ವಿರಾಟ್‌ ಅವರು ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್, ಜಿಂಬಾಬ್ವೆಯ ಸಿಕಂದರ್ ರಾಜಾ ಅವರನ್ನು ಹಿಂದಿಕ್ಕಿದರು. ‘ಐಸಿಸಿಯ ತಿಂಗಳ ಆಟಗಾರ ಎನಿಸಿಕೊಂಡಿರುವುದು ದೊಡ್ಡ ಗೌರವ. ವಿಶ್ವದಾದ್ಯಂತ ಅಭಿಮಾನಿಗಳು ಹಾಗೂ ಸಮಿತಿಯು ನನ್ನನ್ನು ಆಯ್ಕೆ ಮಾಡಿರುವುದರಿಂದ ಇನ್ನೂ ವಿಶೇಷ ಎನಿಸಿದೆ‘ ಎಂದು ವಿರಾಟ್‌ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.