ಜಯ ತಂದಿತ್ತ ನಿಕಿನ್, ಕೌಶಿಕ್ ಕೋಲ್ಕತ್ತ: ನಿಕಿನ್‌ ಜೋಸ್‌ (96 ರನ್‌) ಮತ್ತು ವಿ.ಕೌಶಿಕ್‌ (27ಕ್ಕೆ 4) ಅವರ ಉತ್ತಮ ಆಟದ ನೆರವಿನಿಂದ ಕರ್ನಾಟಕ ತಂಡ, ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿತು. ಕೋಲ್ಕತ್ತದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮಯಂಕ್ ಅಗರವಾಲ್‌ ಬಳಗ 66 ರನ್‌ಗಳಿಂದ ವಿದರ್ಭ ತಂಡವನ್ನು ಮಣಿಸಿತು. ಕರ್ನಾಟಕ ತನ್ನ ಆರಂಭಿಕ ಪಂದ್ಯದಲ್ಲಿ ಶನಿವಾರ, ಮೇಘಾಲಯ ವಿರುದ್ಧ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ರಾಜ್ಯ ತಂಡ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 314 ರನ್‌ ಪೇರಿಸಿತು. ಆರಂಭಿಕ ಬ್ಯಾಟರ್‌ಗಳಾದ ಆರ್‌.ಸಮರ್ಥ್‌ (19) ಮತ್ತು ಮಯಂಕ್‌ (9) ಅವರು ಬೇಗನೇ ಔಟಾದರೂ ಮಧ್ಯಮ ಕ್ರಮಾಂಕದಲ್ಲಿ ನಿಕಿನ್‌ ಜೋಸ್‌ ಆಸರೆಯಾದರು. ಅವರಿಗೆ ಅನುಭವಿ ಮನೀಷ್‌ ಪಾಂಡೆ (44 ರನ್, 39 ಎ.) ಮತ್ತು ಸತತ ಎರಡನೇ ಅರ್ಧಶತಕ ಗಳಿಸಿದ ಶ್ರೇಯಸ್‌ ಗೋಪಾಲ್ (56 ರನ್‌, 43 ಎ.) ತಕ್ಕ ಸಾಥ್‌ ನೀಡಿದರು. 121 ಎಸೆತಗಳನ್ನು ಎದುರಿಸಿದ ನಿಕಿನ್‌, ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಸವಾಲಿನ ಗುರಿ ಬೆನ್ನಟ್ಟಿದ ವಿದರ್ಭ ತಂಡ ವಿ.ಕೌಶಿಕ್‌ (27ಕ್ಕೆ 4) ಮತ್ತು ವಿದ್ವತ್‌ ಕಾವೇರ‍ಪ್ಪ (40ಕ್ಕೆ 3) ಅವರ ಚುರುಕಿನ ದಾಳಿಗೆ ನಲುಗಿತು. ತಂಡದ ಮೊತ್ತ 51 ಆಗುವಷ್ಟರಲ್ಲಿ ಏಳು ವಿಕೆಟ್‌ಗಳು ಬಿದ್ದಾಗ, ಕರ್ನಾಟಕ ಸುಲಭ ಗೆಲುವನ್ನು ನಿರೀಕ್ಷಿಸಿತ್ತು. ಆದರೆ ಕೊನೆಯ ಕ್ರಮಾಂಕದಲ್ಲಿ ಸೊಗಸಾದ ರೀತಿಯಲ್ಲಿ ಪ್ರತಿರೋಧ ಒಡ್ಡಿದ ಅಕ್ಷಯ್‌ ಕರ್ಣೇವಾರ್‌ (ಔಟಾಗದೆ 104, 131 ಎಸೆತ) ಮತ್ತು ದರ್ಶನ್‌ ನಾಲ್ಕಂಡೆ (57) ಅವರು ಕರ್ನಾಟಕದ ಗೆಲುವನ್ನು ಅಲ್ಪ ತಡವಾಗಿಸಿದರು. ಇವರಿಬ್ಬರು ಎಂಟನೇ ವಿಕೆಟ್‌ಗೆ 140 ರನ್ ಸೇರಿಸಿದರು. ಕರ್ನಾಟಕ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ ಜಾರ್ಖಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ. ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 314 (ನಿಕಿನ್‌ ಜೋಸ್‌ 96, ಮನೀಷ್‌ ಪಾಂಡೆ 44, ಶ್ರೇಯಸ್‌ ಗೋಪಾಲ್‌ 56, ಮನೋಜ್‌ ಭಾಂಡಗೆ 23, ಕೆ.ಗೌತಮ್‌ ಔಟಾಗದೆ 30, ದರ್ಶನ್‌ ನಾಲ್ಕಂಡೆ 74ಕ್ಕೆ 3, ಅಕ್ಷಯ್‌ ಕರ್ಣೇವಾರ್ 57ಕ್ಕೆ 2) ವಿದರ್ಭ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 248 (ಅಕ್ಷಯ್‌ ಕರ್ಣೇವಾರ್‌ ಔಟಾಗದೆ 104, ದರ್ಶನ್‌ ನಾಲ್ಕಂಡೆ 57, ಉಮೇಶ್‌ ಯಾದವ್ 18, ವಿ.ಕೌಶಿಕ್‌ 27ಕ್ಕೆ 4, ವಿದ್ವತ್‌ ಕಾವೇರ‍ಪ್ಪ 40ಕ್ಕೆ 3, ಶ್ರೇಯಸ್‌ ಗೋಪಾಲ್‌ 38ಕ್ಕೆ 1) ಫಲಿತಾಂಶ: ಕರ್ನಾಟಕಕ್ಕೆ 66 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.