ಕ್ರಿಕೆಟ್: ರಾಜಗೋಪಾಲ್ ನಿಧನ ಬೆಂಗಳೂರು:ಮದ್ರಾಸ್ ಹಾಗೂ ಮೈಸೂರು ರಾಜ್ಯ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ್ದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಕೆ.ಆರ್. ರಾಜಗೋಪಾಲ್ (82) ಶುಕ್ರವಾರ ನಿಧನರಾದರು. ಕಳೆದ ಕೆಲವು ವರ್ಷಗಳಿಂದ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರ ಪತ್ನಿ ಪಿ. ಇಂದಿರಾ ನಿಧನರಾಗಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪ್ರಸಕ್ತ ಕಾಲಘಟ್ಟದಲ್ಲಿರುವ ಸ್ಟ್ರೈಕ್‌ರೇಟ್ ಪ್ರಧಾನವಾಗಿರುವ ಬ್ಯಾಟಿಂಗ್ ಶೈಲಿಯು ಆಗಿನ ಕಾಲದಲ್ಲಿಯೇ ರಾಜಗೋಪಾಲ್ ಅವರಿಗೆ ಇತ್ತು ಎಂದು ಹೇಳಲಾಗುತ್ತದೆ. 60 ಹಾಗೂ 70 ದಶಕಗಳಲ್ಲಿ ರಾಜಗೋಪಾಲ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ್ದರು. ಕರ್ನಾಟಕದಿಂದ ಭಾರತ ತಂಡಕ್ಕೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದ ಪ್ರಮುಖ ಆಟಗಾರರೂ ಆಗಿದ್ದರು. 1967ರ ಪ್ರಥಮ ದರ್ಜೆ ಕ್ರಿಕೆಟ್ ಋತುವಿನಲ್ಲಿ 800 ರನ್‌ ಗಳಿಸಿದ್ದರು. ಆದರೆ ಅವರು ದೈಹಿಕವಾಗಿ ಫಿಟ್‌ ಆಗಿಲ್ಲವೆಂದು ವೈದ್ಯರು ಘೋಷಿಸಿದ್ದರು. ಇದರಿಂದಾಗಿ ಆ ವರ್ಷ ಆಸ್ಟ್ರೇಲಿಯಾದ ಎದುರಿನ ಸರಣಿಯಲ್ಲಿ ಆಡುವ ಅವಕಾಶ ಕೈತಪ್ಪಿತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 55 ಪಂದ್ಯಗಳಿಂದ 3074 ರನ್‌ ಗಳಿಸಿದ್ದರು. ಅದರಲ್ಲಿ ಏಳು ಶತಕಗಳು ಸೇರಿವೆ. ಕೀಪಿಂಗ್‌ನಲ್ಲಿಯೂ ಚುರುಕಾಗಿದ್ದ ಅವರು 52 ಕ್ಯಾಚ್ ಹಾಗೂ 22 ಸ್ಟಂಪಿಂಗ್ ಮಾಡಿದ್ದರು. ‘ಅವರು ಆಗಿನ ಸಂದರ್ಭದಲ್ಲಿದ್ದ ಸ್ಟೈಲಿಷ್ ಬ್ಯಾಟರ್‌ಗಳಲ್ಲಿ ಪ್ರಮುಖರಾಗಿದ್ದರು. ದೈವದತ್ತ ಪ್ರತಿಭೆ ಅವರದ್ದು. ಆದರೆ ಅವರಿಗೆ ಉನ್ನತ ಅವಕಾಶಗಳು ಸಿಗಲಿಲ್ಲವೆಂಬುದು ದುರದೃಷ್ಟಕರ. ಸಭ್ಯ ವ್ಯಕ್ತಿತ್ವ ಅವರದ್ದು’ ಎಂದು ಕರ್ನಾಟಕದ ಮಾಜಿ ಕ್ರಿಕೆಟಿಗ ಸುಧಾಕರ್ ರಾವ್ ಸ್ಮರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.