ಆಶೀಶ್‌ ಮಹೇಶ್‌ ಶತಕದ ಸೊಬಗು ಹುಬ್ಬಳ್ಳಿ: ಆಶೀಶ್ ಮಹೇಶ್‌ ಗಳಿಸಿದ ಅಮೋಘ ಶತಕದ ಬಲದಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ 19 ವರ್ಷದೊಳಗಿನವರ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಬಿಗಿಹಿಡಿತ ಸಾಧಿಸಿದೆ. ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 83 ಓವರ್‌ಗಳಲ್ಲಿ 368 ರನ್‌ಗಳಿಗೆ ಆಲೌಟ್‌ ಆಯಿತು. 262 ರನ್‌ಗಳ ಮುನ್ನಡೆ ಗಳಿಸಿತು. ಆಶೀಶ್(118 ರನ್‌, 4x22) ಶತಕ ದಾಖಲಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿರುವ ಹಿಮಾಚಲ ಪ್ರದೇಶ ದಿನದಾಟದ ಅಂತ್ಯಕ್ಕೆ 42 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿದೆ. ಲೋಕೇಶ ಚೌಹಾಣ್ (ಅಜೇಯ 45 ರನ್‌, 4x9) ಹಾಗೂ ಅನಿಮೇಶ್‌ ಠಾಕೂರ್‌ ಬದಲಿಗೆ ಕಣಕ್ಕಿಳಿದಿರುವ ಸೌರಭ್‌ ಠಾಕೂರ್‌ (1ರನ್‌) ಕ್ರೀಸ್‌ನಲ್ಲಿದ್ದಾರೆ. ಇನಿಂಗ್ಸ್‌ ಹಿನ್ನಡೆ ತಪ್ಪಿಸಿಕೊಳ್ಳಲು ಹಿಮಾಚಲ ತಂಡಕ್ಕೆ 114 ರನ್‌ ಬೇಕಿದೆ. ಭಾನುವಾರ ಒಂದು ಬದಿಯಲ್ಲಿ ವಿಕೆಟ್‌ ಉರುಳುತ್ತಿದ್ದವು. ಮತ್ತೊಂದು ತುದಿಯಲ್ಲಿ ಆಶೀಶ್‌ ಮಹೇಶ ಅಬ್ಬರಿಸಿದರು. 86 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಸ್ಪಿನ್ನರ್‌ಗಳ ಮಿಂಚು: ಎರಡನೇ ದಿನವೂ ಸ್ಪಿನ್ನರ್‌ಗಳು ಮಿಂಚಿದರು. ಶನಿವಾರ 2 ವಿಕೆಟ್‌ಗಳಿಗೆ ಪಡೆದಿದ್ದ ಪಿಯೂಶ್‌ ಠಾಕೂರ್(136ಕ್ಕೆ6), ಭಾನುವಾರ ನಾಲ್ಕು ವಿಕೆಟ್‌ ಕಬಳಿಸಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನ್ಸಿಂಗ್‌: ಹಿಮಾಚಲ ಪ್ರದೇಶ:59.4 ಓವರ್‌ಗಳಲ್ಲಿ 106 ರನ್‌; ಕರ್ನಾಟಕ: 83 ಓವರ್‌ಗಳಲ್ಲಿ 368 ರನ್‌(ಧ್ರುವ್ ಪ್ರಭಾಕರ 32, ಯಶೋವರ್ಧನ ಪರಂತಾಪ್ 42, ಆಶೀಶ್ ಮಹೇಶ 118,ಹಾರ್ದಿಕರಾಜ್‌ 19, ಧನುಷಗೌಡ 25, ಪ್ರವಲ್‌ ಸಿಂಗ್‌ 70ಕ್ಕೆ2, ಪಿಯೂಶ್ ಠಾಕೂರ್ 136ಕ್ಕೆ6). ದ್ವಿತೀಯ ಇನಿಂಗ್ಸ್‌: ಹಿಮಾಚಲಪ್ರದೇಶ: 42 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್‌(ಲೋಕೇಶ ಚೌಹಾಣ್ ಅಜೇಯ 45, ಪಿಯೂಶ್ ಶರ್ಮಾ 36, ಗಂಗಾಸಿಂಗ್‌ 25, ಮೊಹಸಿನ್‌ ಖಾನ್‌ 37ಕ್ಕೆ2). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.