ಟಿ20 ಕ್ರಿಕೆಟ್: ‘ಹೊಸ’ ಆರಂಭದ ಹಾದಿಯಲ್ಲಿ ಹಾರ್ದಿಕ್ ಬಳಗ ವೆಲ್ಲಿಂಗ್ಟನ್: ಹೋದ ವಾರ ಟಿ20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದ ಭಾರತ ತಂಡ ಶುಕ್ರವಾರದಿಂದ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇನ್ನೆರಡು ವರ್ಷಗಳ ನಂತರ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಸಿದ್ಧಗೊಳಿಸುವ ಪ್ರಯೋಗದ ಮೊದಲ ಹೆಜ್ಜೆ ಈ ಸರಣಿ ಎಂದು ಹೇಳಲಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬೌಲರ್ ಮೊಹಮ್ಮದ್ ಶಮಿ, ಭುವನೇಶ್ವರ್ ಯಾದವ್ ಮತ್ತು ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ವಿಶ್ರಾಂತಿ ಕೊಡಲಾಗಿದೆ. ಇದರಿಂದಾಗಿ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ಮೂವರು ವಿಕೆಟ್‌ಕೀಪರ್‌ಗಳಾದ ರಿಷಭ್, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ತಂಡದಲ್ಲಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಹಾಗೂ ವೇಗಿ ಉಮ್ರಾನ್ ಮಲಿಕ್ ಅವರೂ ಇದ್ದಾರೆ. ನ್ಯೂಜಿಲೆಂಡ್ ತಂಡವೂ ವಿಶ್ವಕಪ್ ಟೂರ್ನಿಯ ನಾಲ್ಕರ ಘಟ್ಟದಲ್ಲಿ ಸೋಲನುಭವಿಸಿತ್ತು. ಅಲ್ಲಿ ಆಡಿದ್ದ ತಂಡವನ್ನೇ ಇಲ್ಲಿಯೂ ಉಳಿಸಿಕೊಳ್ಳಲಾಗಿದೆ. ಡೆವೊನ್ ಕಾನ್ವೆ, ಜಿಮ್ಮಿ ನಿಶಾಮ್ ಹಾಗೂ ಗ್ಲೆನ್ ಫಿಲಿಪ್ಸ್ ಉತ್ತಮ ಲಯದಲ್ಲಿದ್ದು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಚಿಂತೆ ಇಲ್ಲ. ವೇಗಿ ಟಿಮ್ ಸೌಥಿ ಮೇಲೆ ಹೆಚ್ಚು ಹೊರೆ ಬೀಳಲಿದೆ. ತಂಡಗಳು: ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್, ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್. ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೆಸ್‌ವೆಲ್, ಡೆವೊನ್ ಕಾನ್ವೆ (ವಿಕೆಟ್‌ಕೀಪರ್), ಲಾಕಿ ಫರ್ಗ್ಯುಸನ್, ಡೆರಿಲ್ ಮಿಚೆಲ್, ಆ್ಯಡಂ ಮಿಲ್ನೆ, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೌಥಿ, ಈಶ್ ಸೌಧಿ, ಬ್ಲೇರ್ ಟಿಕ್ನರ್. ಪಂದ್ಯ ಆರಂಭ: ಮಧ್ಯಾಹ್ನ 12ರಿಂದ ನೇರಪ್ರಸಾರ: ಅಮೆಜಾನ್‌ ಪ್ರೈಮ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.