ಸ್ಮಿತ್‌, ಸ್ಟಾರ್ಕ್‌ ಪರಾಕ್ರಮ: ಆಸ್ಟ್ರೇಲಿಯಾಕ್ಕೆ ಸರಣಿ ಸಿಡ್ನಿ: ಸ್ಟೀವನ್ ಸ್ಮಿತ್‌ (94) ಸುಂದರ ಬ್ಯಾಟಿಂಗ್‌ ಹಾಗೂ ವೇಗಿ ಮಿಚೆಲ್ ಸ್ಟಾರ್ಕ್‌ (47ಕ್ಕೆ 4) ಮತ್ತು ಸ್ಪಿನ್ನರ್ ಆ್ಯಡಂ ಜಂಪಾ (45ಕ್ಕೆ 4) ಅವರ ಬೌಲಿಂಗ್‌ ಬಲದಿಂದ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ಸಾಧಿಸಿತು. ಇಂಗ್ಲೆಂಡ್‌ ತಂಡದ ವಿರುದ್ಧ ಇಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 72 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ, ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು. ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 280 ರನ್‌ ಗಳಿಸಿತು. ಬಳಿಕ ಇಂಗ್ಲೆಂಡ್‌ ತಂಡವನ್ನು 38.5 ಓವರ್‌ಗಳಲ್ಲಿ 208 ರನ್‌ಗಳಿಗೆ ನಿಯಂತ್ರಿಸಿತು. ಡೇವಿಡ್‌ ವಾರ್ನರ್‌ (16) ಮತ್ತು ಟ್ರಾವಿಸ್‌ ಹೆಡ್‌ (19) ಸಾಧಾರಣ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಈ ಹಂತದಲ್ಲಿ ಸ್ಮಿತ್‌ ಮತ್ತು ಮಾರ್ನಸ್‌ ಲಾಬುಶೇನ್ (58) ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ 99 ರನ್‌ ಸೇರಿಸಿದರು. ಸ್ಮಿತ್ ಅವರ 114 ಎಸೆತಗಳ ಇನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳಿದ್ದವು. ಬಳಿಕ ಮಿಚೆಲ್ ಮಾರ್ಷ್‌ (50) ಅರ್ಧಶತಕದ ಕಾಣಿಕೆ ನೀಡಿದರು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಸ್ಟಾರ್ಕ್‌ ಮೊದಲ ಓವರ್‌ನಲ್ಲೇ ಆಘಾತ ನೀಡಿದರು. ಜೇಸನ್‌ ರಾಯ್‌ ಮತ್ತು ಡೇವಿಡ್‌ ಮಲಾನ್ ಅವರನ್ನು ಶೂನ್ಯಕ್ಕೆ ಔಟ್‌ ಮಾಡಿದರು. ಜೇಮ್ಸ್ ವಿನ್ಸ್ (60) ಮತ್ತು ಸ್ಯಾಮ್‌ ಬಿಲಿಂಗ್ಸ್ (71) ಮಧ್ಯಮ ಕ್ರಮಾಂಕದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಸ್ಟಾರ್ಕ್‌, ಜಂಪಾ ಮತ್ತು ಹ್ಯಾಜಲ್‌ವುಡ್‌ (33ಕ್ಕೆ 2) ಇಂಗ್ಲೆಂಡ್‌ ಜಯದ ಅವಕಾಶ ಕಸಿದರು. ಪ್ಯಾಟ್‌ ಕಮಿನ್ಸ್ ವಿಶ್ರಾಂತಿ ಪಡೆದಿದ್ದರಿಂದ ಆಸ್ಟ್ರೇಲಿಯಾ ತಂಡವನ್ನು ವೇಗಿ ಜೋಶ್ ಹ್ಯಾಜಲ್‌ವುಡ್‌ ಮುನ್ನಡೆಸಿದರು. ಏಕದಿನ ಮಾದರಿಯಲ್ಲಿ ತಂಡದ ಸಾರಥ್ಯ ವಹಿಸಿದ 28ನೇ ಆಟಗಾರ ಎನಿಸಿಕೊಂಡರು. ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 280 (ಟ್ರಾವಿಸ್‌ ಹೆಡ್‌ 19, ಸ್ಟೀವನ್ ಸ್ಮಿತ್ 94, ಮಾರ್ನಸ್‌ ಲಾಬುಶೇನ್‌ 58, ಮಿಚೆಲ್ ಮಾರ್ಷ್‌ 50; ಕ್ರಿಸ್‌ ವೋಕ್ಸ್ 42ಕ್ಕೆ 2, ಡೇವಿಡ್ ವಿಲಿ 44ಕ್ಕೆ 2, ಮೋಯಿನ್ ಅಲಿ 24ಕ್ಕೆ 1, ಆದಿಲ್ ರಶೀದ್‌ 57ಕ್ಕೆ 3). ಇಂಗ್ಲೆಂಡ್‌: 38.5 ಓವರ್‌ಗಳಲ್ಲಿ 208ಕ್ಕೆ ಆಲೌಟ್‌ (ಫಿಲ್ ಸಾಲ್ಟ್‌ 23, ಜೇಮ್ಸ್ ವಿನ್ಸ್‌ 60, ಸ್ಯಾಮ್ ಬಿಲಿಂಗ್ಸ್ 71, ಲಿಯಾಮ್ ಡಾಸನ್‌ 20; ಮಿಚೆಲ್ ಸ್ಟಾರ್ಕ್‌ 47ಕ್ಕೆ 4, ಜೋಷ್‌ ಹ್ಯಾಜಲ್‌ವುಡ್‌ 33ಕ್ಕೆ 2, ಆ್ಯಡಂ ಜಂಪಾ 45ಕ್ಕೆ 4). ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 72 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.