ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಬೆಂಚ್‌ ಶಕ್ತಿಯ ಪರೀಕ್ಷೆಯತ್ತ ರೋಹಿತ್ ಚಿತ್ತ ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಫೈನಲ್‌ ಪ್ರವೇಶಿಸಿರುವ ಭಾರತವು ಶುಕ್ರವಾರ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಇದು ಔಪಚಾರಿಕ ಪಂದ್ಯವಾಗಿದೆ. ಅಂತೆಯೇ ಮೊದಲೆರಡೂ ಪಂದ್ಯಗಳಲ್ಲಿ ಸೋತಿರುವ ಬಾಂಗ್ಲಾದೇಶ, ಇದರಲ್ಲಿ ಗೆದ್ದರೂ ಫೈನಲ್ ಪ್ರವೇಶಿಸಲು ಸಾಧ್ಯವಿಲ್ಲ. ಆದರೆ, ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಏಷ್ಯಾ ಕಪ್ ಹಾಗೂ ಇದೇ ತಿಂಗಳು ನಡೆಯುವ ಆಸ್ಟ್ರೇಲಿಯಾ ಎದುರಿನ ಸರಣಿಗಳು ಭಾರತ ತಂಡಕ್ಕೆ ಪೂರ್ವ ಅಭ್ಯಾಸದ ವೇದಿಕೆಗಳಾಗಿವೆ. ಆದ್ದರಿಂದ ಬೆಂಚ್‌ನಲ್ಲಿದ್ದ ಆಟಗಾರರಿಗೆ ಬಾಂಗ್ಲಾ ಎದುರಿನ ಹಣಾಹಣಿಯಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಅವರು ಅರ್ಧಶತಕ ಬಾರಿಸಿದ್ದು, ಶತಕ ಗಳಿಸಿರುವ ವಿರಾಟ್ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್ ಉತ್ತಮ ಲಯದಲ್ಲಿದ್ದಾರೆ. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಹುಲ್ ವಿಕೆಟ್‌ಕೀಪಿಂಗ್‌ನಲ್ಲಿಯೂ ತಕ್ಕಮಟ್ಟಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಬೌಲಿಂಗ್‌ನಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಪರಿಣಾಮಕಾರಿಯಾಗಿದ್ದಾರೆ. ವೇಗಿ ಬೂಮ್ರಾ ಕೂಡ ಲೈನ್ ಮತ್ತು ಲೆಂಗ್ತ್ ಕಂಡುಕೊಂಡಿದ್ದಾರೆ. ರಾಹುಲ್ ಹಾಗೂ ಬೂಮ್ರಾ ಅವರು ಈ ಟೂರ್ನಿಗೆ ಬರುವ ಮುನ್ನ ಗಾಯದಿಂದಾಗಿ ಸುದೀರ್ಘ ಸಮಯ ಆಟದಿಂದ ದೂರವಿದ್ದರು. ಆದ್ದರಿಂದ ಅವರಿಗೆ ವಿಶ್ರಾಂತಿ ಕೊಡುವ ಸಾಧ್ಯತೆ ಹೆಚ್ಚಿದೆ. ಹಾಗೊಮ್ಮೆ ಆದರೆ, ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಬಹುದು. ಇಶಾನ್ ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸಬಹುದು. ಈ ಟೂರ್ನಿಯಲ್ಲಿ ಬೂಮ್ರಾ ಒಟ್ಟು 12 ಓವರ್‌ ಹಾಗೂ ಮೊಹಮ್ಮದ್ ಸಿರಾಜ್ 19.2 ಓವರ್‌ ಬೌಲಿಂಗ್ ಮಾಡಿದ್ದಾರೆ. ಹಾರ್ದಿಕ್ ಕೂಡ 18 ಓವರ್‌ಗಳನ್ನು ಹಾಕಿದ್ದಾರೆ. ಕಾರ್ಯಭಾರ ನಿರ್ವಹಣೆ ಸೂತ್ರದ ಅನುಗುಣವಾಗಿ ಸಿರಾಜ್ ಅವರಿಗೆ ವಿಶ್ರಾಂತಿ ನೀಡಿ ಮೊಹಮ್ಮದ್ ಶಮಿ ಅವರನ್ನು ಆಡಿಸಬಹುದು. ಏಕದಿನ ಕ್ರಿಕೆಟ್‌ನಲ್ಲಿ ಅಷ್ಟೇನೂ ಪರಿಣಾಮಕಾರಿಯಲ್ಲದ ಅಕ್ಷರ್ ಪಟೇಲ್ ಮತ್ತು ಬ್ಯಾಟಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಮತ್ತೊಂದು ಅವಕಾಶ ಸಿಗಬಹುದು. ಬಾಂಗ್ಲಾ ತಂಡವು ಮುಷ್ಫೀಕುರ್ ರಹೀಮ್ ಅವರಿಲ್ಲದೇ ಕಣಕ್ಕಿಳಿಯಬೇಕಿದೆ. ಅವರ ಬದಲಿಗೆ ಲಿಟನ್ ದಾಸ್ ವಿಕೆಟ್‌ಕೀಪಿಂಗ್ ನಿಭಾಯಿಸುವರು. ನಾಯಕ ಶಕೀಬ್ ಅಲ್ ಹಸನ್ ಅವರು ತಂಡಕ್ಕೆ ಮರಳಿದ್ದಾರೆ. ಪಂದ್ಯ ಆರಂಭ: ಮಧ್ಯಾಹ್ನ 3ರಿಂದ ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.