ಪೂಜಾರಾಗೆ ಅರ್ಜುನ ಪ್ರಶಸ್ತಿ ಪ್ರದಾನ ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ ಅವರಿಗೆ ಘೋಷಣೆಯಾಗಿ ಐದು ವರ್ಷಗಳ ನಂತರ ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. 2017ರಲ್ಲಿಯೇ ಅವರಿಗೆ ಈ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಕ್ರಿಕೆಟ್ ಪ್ರವಾಸಗಳ ಕಾರಣದಿಂದಾಗಿ ಪೂಜಾರಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಶನಿವಾರ ಅವರಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿದರು. ‘ನನಗೆ ಅರ್ಜುನ ಪ್ರಶಸ್ತಿ ಹಸ್ತಾಂತರಿಸಲು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಕ್ರೀಡಾ ಇಲಾಖೆ, ಬಿಸಿಸಿಐ ಹಾಗೂ ಸಚಿವ ಅನುರಾಗ್ ಠಾಕೂರ್ ಅವರಿಗೆ ಧನ್ಯವಾದಗಳು. ಘೋಷಣೆಯಾದ ವರ್ಷದಲ್ಲಿ ಕ್ರಿಕೆಟ್‌ ಸರಣಿಗಳಲ್ಲಿ ಆಡಲು ತೆರಳಿದ್ದೆ. ಆದ್ದರಿಂದ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ’ ಎಂದು ಪೂಜಾರ ಟ್ವೀಟ್ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ಪೂಜಾರ ಪ್ರತಿನಿಧಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ತಂಡವು ಆಡುತ್ತಿದೆ. ಅಲ್ಲಿಯೇ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪೂಜಾರಾ 96 ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಈಚೆಗೆ ಕೌಂಟಿ ಕ್ರಿಕೆಟ್‌ನಲ್ಲಿಯೂ ಉತ್ತಮವಾಗಿ ಆಡಿದ್ದಾರೆ. ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದು ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.