2023| ರೋಹಿತ್–ಗಿಲ್ ಶತಕ ಜೊತೆಯಾಟ, ಮಳೆಯಿಂದಾಗಿ ಮೀಸಲು ದಿನಕ್ಕೆ ಪಂದ್ಯ ಕೊಲಂಬೊ: ಭಾನುವಾರ ಸಂಜೆ ಮಳೆ ಸುರಿಯುವ ಮುನ್ನ ಭಾರತದ ಆರಂಭಿಕ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಚೆಂದದ ಜೊತೆಯಾಟ ನೋಡುಗರ ಮನಕ್ಕೆ ಮುದ ನೀಡಿತು. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಆ ಬುನಾದಿಯ ಮೇಲೆ ಬೃಹತ್ ಮೊತ್ತ ಪೇರಿಸುವ ಭರವಸೆಯೂ ಮೂಡಿತ್ತು. ಆದರೆ, ಸಂಜೆ 4.52ಕ್ಕೆ ರಭಸದ ಮಳೆ ಆರಂಭವಾಯಿತು. ಮಳೆ ನಿಂತ ನಂತರ ನಾಲ್ಕು ಬಾರಿ (ರಾತ್ರಿ 7, 7.30, 8 ಹಾಗೂ 8.20ಕ್ಕೆ) ಪಿಚ್‌ ಹಾಗೂ ಹೊರಾಂಗಣವನ್ನು ಅಂಪೈರ್‌ಗಳು ಪರಿಶೀಲಿಸಿದರು. ಆದರೆ ಅದೇ ಹೊತ್ತಿಗೆ ಮತ್ತೆ ಮಳೆ ಆರಂಭವಾಯಿತು. ಆದ್ದರಿಂದ ಆಟವನ್ನು ನಿಲ್ಲಿಸಿ, ಮೀಸಲು ದಿನಕ್ಕೆ ಮುಂದೂಡಲಾಯಿತು. ಭಾರತ ತಂಡವು 24.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 147 ರನ್‌ ಗಳಿಸಿದ್ದ ಸಂದರ್ಭದಲ್ಲಿ ಮಳೆ ಆರಂಭವಾಯಿತು. ಆಗ ಕ್ರೀಸ್‌ನಲ್ಲಿ ವಿರಾಟ್ ಕೊಹ್ಲಿ (ಬ್ಯಾಟಿಂಗ್ 8) ಮತ್ತು ಕೆ.ಎಲ್. ರಾಹುಲ್ (17 ರನ್) ಇದ್ದರು. ಸೋಮವಾರದ ಆಟವು ಇದೇ ಹಂತದಿಂದ ಮುಂದುವರಿಯಲಿದೆ. ರೋಹಿತ್, ಗಿಲ್ ಅಬ್ಬರ: ಹೋದ ವಾರ ನಡೆದಿದ್ದ ಗುಂಪು ಹಂತದ ಪಂದ್ಯದಲ್ಲಿ ಪಾಕ್ ಬೌಲರ್‌ಗಳ ಎದುರು ಭಾರತದ ಆರಂಭಿಕ ಜೋಡಿ ರೋಹಿತ್ ಮತ್ತು ಗಿಲ್ ಮಂಕಾಗಿದ್ದರು. ಆದರೆ ಇಲ್ಲಿ ಪಾಕ್ ತಂಡದ ಎಲ್ಲ ಬೌಲರ್‌ಗಳಿಗೂ ತಿರುಗೇಟು ನೀಡಿದರು. ರೋಹಿತ್ (56; 49ಎ, 4X6, 6X4) ಹಾಗೂ ಗಿಲ್ (58; 52, 4X10) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 121 ರನ್‌ ಸೇರಿಸಿ ಅಮೋಘ ಆರಂಭ ನೀಡಿದರು. ಇದಕ್ಕಾಗಿ ಅವರು ಕೇವಲ 100 ಎಸೆತಗಳನ್ನು ಎದುರಿಸಿದರು. ಪಂದ್ಯದ ಮೊದಲ ಓವರ್‌ನಲ್ಲಿಯೇ ಶಹೀನ್ ಆಫ್ರಿದಿಯ ಎಸೆತವನ್ನು ಸಿಕ್ಸರ್‌ಗೆತ್ತಿದ ರೋಹಿತ್ ತಮ್ಮ ಬೀಸಾಟಕ್ಕೆ ಮುನ್ನುಡಿ ಬರೆದರು. ಇನ್ನೊಂದೆಡೆ ಗಿಲ್ ಕೂಡ ಆತ್ಮವಿಶ್ವಾಸದಿಂದ ಆಡಿದರು. ತಮ್ಮ ಸ್ಟಾನ್ಸ್‌ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಆಡಿದ ಅವರು ಆಫ್ರಿದಿಯ ನಿಧಾನಗತಿಯ ಸ್ವಿಂಗ್‌ಗಳಿಗೆ ತಕ್ಕ ಉತ್ತರ ಕೊಟ್ಟರು. ಬ್ಯಾಕ್‌ಫೂಟ್, ಫ್ರಂಟ್ ಫೂಟ್ ಮತ್ತು ಫ್ಲಿಕ್‌ಗಳ ಆಟಕ್ಕೆ ಒತ್ತು ಕೊಟ್ಟರು. ಆಫ್ರಿದಿ ಎಸೆತಗಳಲ್ಲಿಯೇ ಒಟ್ಟು ಆರು ಬೌಂಡರಿ ದಾಖಲಿಸಿದರು. ಇವರಿಬ್ಬರ ಅಬ್ಬರದಿಂದಾಗಿ ಭಾರತ ತಂಡವು ಮೊದಲ ಪವರ್‌ಪ್ಲೇನಲ್ಲಿಯೇ ವಿಕೆಟ್ ನಷ್ಟವಿಲ್ಲದೇ 61 ರನ್ ಸೇರಿಸಿತು. ರೋಹಿತ್ ವೇಗದ ಬೌಲರ್‌ಗಳಿಗೆ ತಮ್ಮ ಚೆಂದದ ಪುಲ್‌ ಹೊಡೆತಗಳ ಮೂಲಕ ಉತ್ತರ ಕೊಟ್ಟರು. ಸ್ಪಿನ್ನರ್ ಶಾದಾಬ್‌ ಖಾನ್ ಅವರನ್ನು ದಂಡಿಸಿದರು. ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿ ಇದ್ದ 19 ರನ್‌ಗಳನ್ನು ರೋಹಿತ್ ಸೂರೆ ಮಾಡಿದರು. 17ನೇ ಓವರ್‌ನಲ್ಲಿ ಶಾದಾಬ್ ಖಾನ್ ಅವರ ಎಸೆತದಲ್ಲಿಯೇ ರೋಹಿತ್ ಔಟಾದರು. ಅದರೊಂದಿಗೆ ಜೊತೆಯಾಟ ಮುರಿಯಿತು. ನಂತರದ ಓವರ್‌ನಲ್ಲಿ ಆಫ್ರಿದಿ ಅವರು ಗಿಲ್ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ ಜೊತೆಗೂಡಿದ ರಾಹುಲ್ ಇನಿಂಗ್ಸ್‌ಗೆ ಬಲ ತುಂಬುವ ವಿಶ್ವಾಸ ಮೂಡಿಸಿದರು. ಗಾಯ ಮತ್ತು ಶಸ್ತ್ರಚಿಕಿತ್ಸೆಯಿಂದಾಗಿ ಸುಮಾರು ನಾಲ್ಕು ತಿಂಗಳು ವಿಶ್ರಾಂತಿಯಲ್ಲಿದ್ದ ರಾಹುಲ್ ಕಣಕ್ಕೆ ಮರಳಿದರು. ಗಾಯಗೊಂಡಿರುವ ಶ್ರೇಯಸ್ ಅಯ್ಯರ್ ಬದಲು ರಾಹುಲ್ ತಂಡದಲ್ಲಿ ಸ್ಥಾನ ಪಡೆದರು. ಇಶಾನ್ ಕಿಶನ್ ಕೂಡ ಹನ್ನೊಂದರ ಬಳಗದಲ್ಲಿದ್ದಾರೆ. ಆರಂಭ: ಮಧ್ಯಾಹ್ನ 3 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.