| ಆರಂಭಿಕ ಬ್ಯಾಟಿಂಗ್ ಜೋಡಿಗೆ ಪರೀಕ್ಷೆ ಮೀರಪುರ್: ಭಾರತ ಏಕದಿನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಸ್ಥಾನ ಉಳಿಸಿಕೊಳ್ಳಲು ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಅವರಿಗೆ ಭಾನುವಾರ ಆರಂಭವಾಗಲಿರುವ ಬಾಂಗ್ಲಾದೇಶ ಎದುರಿನ ಸರಣಿಯು ಪರೀಕ್ಷಾ ಕಣವಾಗಲಿದೆ. ಮೂರು ಪಂದ್ಯಗಳ ಸರಣಿ ಇದಾಗಿದೆ. ಈಚೆಗೆ ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ರಾಹುಲ್, ವಿರಾಟ್ ಕೊಹ್ಲಿ ಅವರು ತಂಡಕ್ಕೆ ಮರಳಿದ್ದಾರೆ. ಇದರಿಂದಾಗಿ ತಂಡದ ಬಲ ಹೆಚ್ಚಿದೆ. ಆದರೆ ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸಂಜು ಸ್ಯಾಮ್ಸನ್ ಕೂಡ ಇಲ್ಲ. ಯುವ ಆಟಗಾರರಾದ ರಜತ್ ಪಾಟೀದಾರ್, ರಾಹುಲ್ ತ್ರಿಪಾಠಿ, ವೇಗಿ ಉಮ್ರಾನ್ ಮಲೀಕ್ ಸ್ಥಾನ ಗಿಟ್ಟಿಸಿದ್ದಾರೆ. ಗಾಯಗೊಂಡಿರುವ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್‌ ಹಾಗೂ ಜಸ್‌ಪ್ರೀತ್ ಬೂಮ್ರಾ ಅವರ ಗೈರಿನಲ್ಲಿ ಉಮ್ರಾನ್‌, ದೀಪಕ್ ಚಾಹರ್ ಹಾಗೂ ಸಿರಾಜ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಲಿದೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಬೌಲರ್ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆ ಇದೆ. ವಿಕೆಟ್‌ಕೀಪಿಂಗ್‌ನಲ್ಲಿ ರಿಷಭ್ ಪಂತ್ ತಮ್ಮ ಸಾಮರ್ಥ್ಯ ತೋರುವ ಒತ್ತಡದಲ್ಲಿದ್ದಾರೆ. ಅವರು ವೈಫಲ್ಯದಿಂದ ಹೊರಬರದಿದ್ದರೆ ಇಶಾನ್ ಕಿಶನ್‌ಗೆ ಅವಕಾಶ ಸಿಗುವುದು ಖಚಿತ. ಬಾಂಗ್ಲಾ ತಂಡವು ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಎದುರು ಸೋತಿತ್ತು. ಏಕದಿನ ತಂಡಕ್ಕೆ ನಾಯಕತ್ವ ವಹಿಸಿಕೊಂಡಿರುವ ಲಿಟನ್ ದಾಸ್ ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಆದರೆ ತಂಡದಲ್ಲಿ ಪ್ರಮುಖ ಬೌಲರ್ ತಸ್ಕಿನ್ ಅಹಮದ್ ಗಾಯಗೊಂಡು ವಿಶ್ರಾಂತಿ ಪಡೆದಿದ್ದಾರೆ. ಇದರಿಂದಾಗಿ ಮುಸ್ತಫಿಜುರ್ ರೆಹಮಾನ್ ಮೇಲೆ ಒತ್ತಡ ಹೆಚ್ಚಲಿದೆ. ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ರಜತ್ ಪಾಟೀದಾರ್, ರಾಹುಲ್ ತ್ರಿಪಾಠಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹಮದ್, ಮೊಹಮ್ಮದ್ ಸಿರಾಜ್. ಬಾಂಗ್ಲಾದೇಶ: ಲಿಟನ್ ಕುಮಾರ್ ದಾಸ್ (ನಾಯಕ), ಅನಾಮುಲ್ ಹೇಗ್ ಬಿಜಯ್, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಮ್, ಅಫಿಫ್ ಹುಸೇನ್, ಯಾಸೀರ್ ಅಲಿ ಚೌಧರಿ, ಮೆಹದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹಮದ್, ಹಸನ್ ಮೆಹಮೂದ್, ಇಬಾದತ್ ಹುಸೇನ್ ಚೌಧರಿ, ನಸೂಮ್ ಅಹಮದ್, ಮೆಹಮೂದ್ ಉಲ್ಲಾಹ, ನಜ್ಮುಲ್ ಹುಸೇನ್ ಶಾಂತೊ, ಖಾಜಿ ನೂರುಲ್ ಹಸನ್ ಸೋಹನ್, ಶರೀಫುಲ್ ಇಸ್ಕಾಮ್. ಪಂದ್ಯ ಆರಂಭ: ಬೆಳಿಗ್ಗೆ 11.30. -- ಬಲಾಬಲ (ಏಕದಿನ) ಪಂದ್ಯ;36 ಭಾರತ ಜಯ;30 ಬಾಂಗ್ಲಾ ಜಯ;5 ಫಲಿತಾಂಶವಿಲ್ಲ;1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.