ಫೆಬ್ರುವರಿಯಲ್ಲಿ ಬಾರ್ಡರ್‌–ಗಾವಸ್ಕರ್ ಟೆಸ್ಟ್ ಸರಣಿ ನವದೆಹಲಿ: ಮುಂದಿನ ವರ್ಷದ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಎದುರಿನ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಗೆ ಆತಿಥ್ಯ ವಹಿಸಲಿದೆ. ಸರಣಿಯಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಫೆಬ್ರುವರಿ 9ರಿಂದ 13ರವರೆಗೆ ನಾಗಪುರದಲ್ಲಿ ಆಯೋಜನೆಗೊಳ್ಳಲಿದೆ. ಉಳಿದ ಪಂದ್ಯಗಳು ನವದೆಹಲಿ (ಫೆ 17–21), ಧರ್ಮಶಾಲಾ (ಮಾ 1–5) ಹಾಗೂ ಅಹಮದಾಬಾದ್ (ಮಾ 9–13) ನಗರಗಳಲ್ಲಿ ನಡೆಯಲಿವೆ. ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ಪಂದ್ಯಗಳು ಮುಂಬೈ (ಮಾ 17), ವಿಶಾಖಪಟ್ಟಣ (ಮಾ 19) ಮತ್ತು ಚೆನ್ನೈನಲ್ಲಿ (ಮಾ 22) ನಡೆಯಲಿವೆ. ಜನವರಿಯಲ್ಲಿ ಶ್ರೀಲಂಕಾ ತಂಡದ ಎದುರಿನ ಟಿ20 ಹಾಗೂ ಏಕದಿನ ಸರಣಿಗೂ ಭಾರತ ಆತಿಥ್ಯ ವಹಿಸಲಿದೆ. ಮೂರು ಟಿ20 ಪಂದ್ಯಗಳು ಮುಂಬೈ (ಜ. 3), ಪುಣೆ (ಜ. 5) ಮತ್ತು ರಾಜಕೋಟ್‌ (ಜ.7) ನಲ್ಲಿ ನಡೆಯಲಿವೆ. ಏಕದಿನ ಪಂದ್ಯಗಳು ಗುವಾಹಟಿ (ಜ. 10), ಕೋಲ್ಕತ್ತ (ಜ. 12) ಮತ್ತು ತಿರುವನಂತಪುರಂ (ಜ. 15) ನಗರಗಳಲ್ಲಿ ನಡೆಯಲಿವೆ. ನಂತರ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ತಂಡದ ಎದುರಿನ ಏಕದಿನ ಸರಣಿಯ ಪಂದ್ಯಗಳು ಹೈದರಾಬಾದ್ (ಜ. 18), ರಾಯಪುರ್ (ಜ. 21) ಮತ್ತು ಇಂದೋರ್ (ಜ.24) ಹಾಗೂ ಟಿ20 ಪಂದ್ಯಗಳು ರಾಂಚಿ (ಜ. 27), ಲಖನೌ (ಜ. 29) ಹಾಗೂ ಅಹಮದಾಬಾದ್ (ಫೆ.1) ನಗರಗಳಲ್ಲಿ ನಡೆಯಲಿವೆ ಎಂದು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.