ಕ್ರಿಕೆಟ್‌ ಟೆಸ್ಟ್: ಪಾಕಿಸ್ತಾನ ತಂಡಕ್ಕೆ ನಿರಾಸೆ- ಇಂಗ್ಲೆಂಡ್‌ಗೆ ಸರಣಿ ಮುಲ್ತಾನ್‌: ವೇಗದ ಬೌಲರ್‌ ಮಾರ್ಕ್‌ ವುಡ್‌ ಗಳಿಸಿದ ನಾಲ್ಕು ವಿಕೆಟ್‌ಗಳ ಬಲದಿಂದ ಇಂಗ್ಲೆಂಡ್‌ ತಂಡವು ಪಾಕಿಸ್ತಾನ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್ ಪಂದ್ಯವನ್ನು 26 ರನ್‌ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು. ಗೆಲುವಿಗೆ 355 ರನ್‌ಗಳ ಗುರಿ ಪಡೆದಿದ್ದ ಪಾಕಿಸ್ತಾನ ನಾಲ್ಕನೇ ದಿನದಾಟವಾದ ಸೋಮವಾರ ಭೋಜನ ವಿರಾಮದ ಬಳಿಕ ಎಲ್ಲ ವಿಕೆಟ್‌ ಕಳೆದುಕೊಂಡಿತು. 328 ರನ್‌ಗಳಿಗೆ ಆಲೌಟ್‌ ಆಯಿತು. ಮಾರ್ಕ್‌ ವುಡ್‌ 65 ರನ್‌ ನೀಡಿ ನಾಲ್ಕು ವಿಕೆಟ್‌ ಕಬಳಿಸಿದರು. ಪಾಕ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 64 ಓವರ್‌ಗಳಲ್ಲಿ 4 ವಿಕೆಟ್‌ಗೆ 198 ರನ್ ಗಳಿಸಿತ್ತು. ಸೌದ್‌ ಶಕೀಲ್ ಮತ್ತು ಫಹೀಮ್ ಅಶ್ರಫ್ ಕ್ರೀಸ್‌ನಲ್ಲಿದ್ದರು. ಹೋರಾಟ ತೋರಿದ ಶಕೀಲ್‌ (94) ಆರು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಫಹೀಂ (10) ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ಮೊಹಮ್ಮದ್ ನವಾಜ್‌ (45) ನಡೆಸಿದ ಹೋರಾಟಕ್ಕೆ ಫಲ ಸಿಗಲಿಲ್ಲ. ಒಲಿ ರಾಬಿನ್ಸನ್‌ (23ಕ್ಕೆ 2) ಮತ್ತು ಜೇಮ್ಸ್ ಆ್ಯಂಡರ್ಸನ್‌ (44ಕ್ಕೆ 2) ಇಂಗ್ಲೆಂಡ್‌ ಗೆಲುವಿಗೆ ಕೊಡುಗೆ ನೀಡಿದರು. ಪಾಕ್‌ ನೆಲದಲ್ಲಿ ಇಂಗ್ಲೆಂಡ್‌ಗೆ ಇದು ಮೂರನೇ ಸರಣಿ ಜಯ. ಇದಕ್ಕೂ ಮೊದಲು 1961 ಮತ್ತು 2000ರಲ್ಲಿ ಗೆಲುವು ಸಾಧಿಸಿತ್ತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್ 281,ಪಾಕಿಸ್ತಾನ: 202, ಎರಡನೇ ಇನಿಂಗ್ಸ್: ಇಂಗ್ಲೆಂಡ್ 275,ಪಾಕಿಸ್ತಾನ: 102.1 ಓವರ್‌ಗಳಲ್ಲಿ 328 (ಸೌದ್‌ ಶಕೀಲ್‌ 94, ಇಮಾಮ್‌ ಉಲ್ ಹಕ್‌ 60, ಮೊಹಮ್ಮದ್ ನವಾಜ್‌ 45, ಅಬ್ರಾರ್ ಅಹಮ್ಮದ್‌ 17; ಮಾರ್ಕ್‌ ವುಡ್‌ 65ಕ್ಕೆ 4,ಒಲಿ ರಾಬಿನ್ಸನ್‌ 23ಕ್ಕೆ 2, ಜೇಮ್ಸ್ ಆ್ಯಂಡರ್ಸನ್‌ 44ಕ್ಕೆ 2). ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 26 ರನ್‌ಗಳ ಜಯ. ಸರಣಿಯಲ್ಲಿ 2–0 ಮುನ್ನಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.