ಟೆಸ್ಟ್‌ ಕ್ರಿಕೆಟ್: ವಿಂಡೀಸ್‌ಗೆ ಹೀನಾಯ ಸೋಲು, ಆಸ್ಟ್ರೇಲಿಯಾಕ್ಕೆ ಸರಣಿ ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳ ದಾಳಿಗೆ ವೆಸ್ಟ್ ಇಂಡೀಸ್ ತಂಡವು ಕುಸಿಯಿತು. ಇದರೊಂದಿಗೆ ಸ್ಟೀವನ್ ಸ್ಮಿತ್ ನಾಯಕತ್ವದ ಬಳಗವು ಇಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 419 ರನ್‌ಗಳಿಂದ ಜಯಿಸಿತು. 2–0ಯಿಂದ ಸರಣಿಯನ್ನೂ ತನ್ನದಾಗಿಸಿಕೊಂಡಿತು. 495 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ವಿಂಡೀಸ್ ತಂಡವು ಪಂದ್ಯದ ಮೂರನೇ ದಿನವಾದ ಶನಿವಾರ ಅಂತ್ಯಕ್ಕೆ 4 ವಿಕೆಟ್‌ಗಳಿಗೆ 38 ರನ್ ಗಳಿಸಿತ್ತು. ಡೆವೊನ್ ಥಾಮಸ್ ಹಾಗೂ ಜೇಸನ್ ಹೋಲ್ಡರ್ ಕ್ರೀಸ್‌ನಲ್ಲಿದ್ದರು. ಆದರೆ ಭಾನುವಾರ ವಿಂಡೀಸ್ ತಂಡವು 39 ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್,ಮೈಕೆಲ್ ನೆಸರ್ ಹಾಗೂ ಸ್ಕಾಟ್ ಬೋಲಾಂಡ್ ತಲಾ ಮೂರು ವಿಕೆಟ್‌ಗಳನ್ನು ಗಳಿಸಿದರು. ಪರ್ತ್‌ನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 164 ರನ್‌ಗಳಿಂದ ಜಯಿಸಿತ್ತು. ಮುಂದಿನ ಶನಿವಾರದಿಂದ ಬ್ರಿಸ್ಬೆನ್‌ನಲ್ಲಿ ಆರಂಭವಾಗಲಿರುವ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ಎದುರು ಆಡಲಿದೆ. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 7ಕ್ಕೆ511 ಡಿಕ್ಲೇರ್ಡ್, ವೆಸ್ಟ್ ಇಂಡೀಸ್: 214, ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 6ಕ್ಕೆ199 ಡಿಕ್ಲೇರ್ಡ್, ವೆಸ್ಟ್ ಇಂಡೀಸ್ 77(ತೇಜನಾರಾಯಣ ಚಂದ್ರಪಾಲ್ 17, ಜೋಶುವಾ ಡಿ ಸಿಲ್ವಾ 15, ರಾಸ್ಟನ್ ಚೇಸ್ 13, ಮಿಚೆಲ್ ಸ್ಟಾರ್ಕ್ 29ಕ್ಕೆ3, ಮೈಕೆಲ್ ನೆಸರ್ 22ಕ್ಕೆ3, ಸ್ಕಾಟ್ ಬೋಲಾಂಡ್ 16ಕ್ಕೆ3) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 419 ರನ್‌ಗಳ ಜಯ ಹಾಗೂ 2–0ಯಿಂದ ಸರಣಿ ಗೆಲುವು. ಪಂದ್ಯಶ್ರೇಷ್ಠ: ಟ್ರಾವಿಸ್ ಹೆಡ್, ಸರಣಿಶ್ರೇಷ್ಠ: ಮಾರ್ನಸ್ ಲಾಬುಷೇನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.