ಶರತ್–ವಿದ್ವತ್ ಆಟ; ಸರ್ವಿಸಸ್‌ಗೆ ಸಂಕಷ್ಟ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಪ್ರತಿಫಲಿಸಿದ ಬಿಸಿಲಿನ ಕಿರಣಗಳಲ್ಲಿ ಕರ್ನಾಟಕದ ಆಟಗಾರರೂ ಬೆಳಗಿದರು. ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಎರಡನೇ ದಿನಬಿ.ಆರ್. ಶರತ್, ಕೃಷ್ಣಪ್ಪ ಗೌತಮ್ ಮತ್ತು ಮಧ್ಯಮವೇಗಿ ವಿದ್ವತ್ ಕಾವೇರಪ್ಪ ಅವರ ಆಟದ ಬಲದಿಂದ ಆತಿಥೇಯ ತಂಡವು ಸರ್ವಿಸಸ್ ಎದುರು ಉತ್ತಮ ಸ್ಥಿತಿ ತಲುಪಿದೆ. ಶರತ್ (77; 115ಎ, 4X10) ಮತ್ತು ಆಫ್‌ಸ್ಪಿನ್ ಆಲ್‌ರೌಂಡರ್ ಗೌತಮ್ (48; 52ಎ, 4X8) ಏಳನೇ ವಿಕೆಟ್ ಜೊತೆಯಾಟದಲ್ಲಿ 90 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಮೊದಲ ಇನಿಂಗ್ಸ್‌ನಲ್ಲಿ 74.4 ಓವರ್‌ಗಳಲ್ಲಿ 304 ರನ್ ಗಳಿಸಲು ಸಾಧ್ಯವಾಯಿತು. ಮಂಗಳವಾರ ತಡರಾತ್ರಿ ನಗರದಲ್ಲಿ ಮಳೆ ಸುರಿದಿದ್ದರಿಂದ ಬುಧವಾರ ಬೆಳಿಗ್ಗೆ ಕ್ರೀಡಾಂಗಣದ ತೇವ ಆರಿರಲಿಲ್ಲ. ಆದ್ದರಿಂದ ಸುಮಾರು ಅರ್ಧತಾಸು ವಿಳಂಬವಾಗಿ ಆಟ ಆರಂಭವಾಯಿತು. ಮೊದಲ ದಿನದಾಟದಲ್ಲಿ ಕರ್ನಾಟಕ ತಂಡವು 40 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 148 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಗೌತಮ್ ಮತ್ತು ಶರತ್ ಎರಡನೇ ದಿನ ಬೆಳಿಗ್ಗೆ ವಿಶ್ವಾಸಭರಿತ ಆಟವಾಡಿದರು.‌ ಸರ್ವಿಸಸ್‌ನ ಫೀಲ್ಡಿಂಗ್ ತಂತ್ರಗಾರಿಕೆಯನ್ನು ವಿಫಲಗೊಳಿಸಿದ ಇಬ್ಬರೂ ಸರಾಗವಾಗಿ ರನ್‌ ಗಳಿಸಿದರು. ದಿನದಾಟದ 19ನೇ ಓವರ್‌ನಲ್ಲಿ ಗೌತಮ್ ಪುಳ್ಕಿತ್ ನಾರಂಗ್ ಎಸೆತದಲ್ಲಿ ದಿವೇಶ್‌ಗೆ ಕ್ಯಾಚಿತ್ತರು. ಎರಡು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಕ್ರೀಸ್‌ನಲ್ಲಿದ್ದ ಶರತ್ ಹೊಣೆಯನ್ನು ತಮ್ಮ ಮೇಲೆ ಎಳೆದುಕೊಂಡು ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದರು. ರೋನಿತ್ ಮೋರೆ ಜೊತೆಗೆ 58 ರನ್‌ ಸೇರಿಸಿದರು. ಆದರೆ ಮೊತ್ತವು ಮುನ್ನೂರು ದಾಟುವ ಮುನ್ನವೇ ಇಬ್ಬರೂ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ವೈಶಾಖ (10; 15ಎ) ಮತ್ತು ವಿದ್ವತ್ (ಔಟಾಗದೆ 13) ಮಿಂಚಿದರು. ಇನಿಂಗ್ಸ್‌ನ ಏಕೈಕ ಸಿಕ್ಸರ್ ಸಿಡಿಸಿದ ವಿದ್ವತ್ ತಂಡದ ‘ತ್ರಿಶತಕ’ಕ್ಕೆ ಕಾಣಿಕೆ ನೀಡಿದರು.ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದ ವಿದ್ವತ್ ಸರ್ವಿಸಸ್ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಪೆಟ್ಟು ಕೊಟ್ಟರು. ಮೂರನೇ ಎಸೆತದಲ್ಲಿ ಶುಭಂ ರೋಹಿಲ್ಲಾ ಹಾಗೂ ಐದನೇ ಎಸೆತದಲ್ಲಿ ರಾಹುಲ್ ಸಿಂಗ್ ವಿಕೆಟ್‌ಗಳನ್ನು ಕಬಳಿಸಿದರು. ಮೂರನೇ ಸ್ಲಿಪ್‌ನಲ್ಲಿದ್ದ ‘ಪದಾರ್ಪಣೆ ಆಟಗಾರ’ ನಿಕಿನ್ ಜೋಸ್ ಆಕರ್ಷಕ ರೀತಿಯಲ್ಲಿ ಪಡೆದ ಕ್ಯಾಚ್‌ಗೆ ರೋಹಿಲ್ಲಾ ಔಟಾದರು. ತಮ್ಮ ಎರಡನೇ ಓವರ್‌ನಲ್ಲಿ ಅನ್ಷುಲ್ ಗುಪ್ತಾ ವಿಕೆಟ್‌ ಕೂಡ ತಮ್ಮದಾಗಿಸಿಕೊಂಡರು. ಇನ್ನೊಂದೆಡೆ ತಾಳ್ಮೆಯಿಂದ ಆಡುತ್ತಿದ್ದ ರವಿ ಚೌಹಾಣ್ (ಬ್ಯಾಟಿಂಗ್ 39) ಅವರೊಂದಿಗೆ ಸೇರಿದ ನಾಯಕ ರಜತ್ ಪಲೀವಾಲ (ಬ್ಯಾಟಿಂಗ್ 42) ವಿಕೆಟ್ ಪತನ ತಡೆದರು. ಆದರೆ, ಮಧ್ಯದಲ್ಲಿ ಗಾಯಗೊಂಡ ರಜತ್ ಕೆಲಹೊತ್ತು ಚಿಕಿತ್ಸೆಗೆ ತೆರಳಿದರು. ಈ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಬಂದ ದೇವೆಂದ್ರ ವಿಕೆಟ್ ಗಳಿಸುವಲ್ಲಿ ವಿಜಯಕುಮಾರ್ ವೈಶಾಖ ಯಶಸ್ವಿಯಾದರು. ಮತ್ತೆ ಕ್ರೀಸ್‌ಗೆ ಮರಳಿದ ರಜತ್ ಬ್ಯಾಟಿಂಗ್ ಮುಂದುವರಿಸಿದರು.ಪಂದ್ಯದಲ್ಲಿ ಇನ್ನೂ ಅರ್ಧ ಗಂಟೆಯ ಆಟ ಬಾಕಿಯಿದ್ದಾಗಲೇ ಮಂದಬೆಳಕಿನ ಕಾರಣಕ್ಕೆ ಸ್ಥಗಿತಗೊಳಿಸಲಾಯಿತು. ಸ್ಕೋರ್‌ ಕಾರ್ಡ್‌ ಕರ್ನಾಟಕ ಮೊದಲ ಇನಿಂಗ್ಸ್ 304 (74.4 ಓವರ್‌) (ಮಂಗಳವಾರ 40 ಓವರ್‌ಗಳಲ್ಲಿ 6ಕ್ಕೆ148) ಶರತ್ ಸಿ ಪಲಿವಾಲ ಬಿ ನಾರಂಗ್ 77 (115ಎ, 4X10), ಗೌತಮ್ ಸಿ ದಿವೇಶ್ ಬಿ ನಾರಂಗ್ 48 (52ಎ, 4X8), ರೋನಿತ್ ಬಿ ರಾಹುಲ್ 26 (41ಎ, 4X4), ವೈಶಾಖ ಸಿ ಪಲೀವಾಲ ಬಿ ನಾರಂಗ್ 10 (15ಎ), ವಿದ್ವತ್ ಔಟಾಗದೆ 13 (15ಎ, 4X1, 6X1) ಇತರೆ 9 (ಲೆಗ್‌ಬೈ 3, ವೈಡ್ 2, ನೋಬಾಲ್ 4)) ವಿಕೆಟ್ ಪತನ: 7–223 (ಗೌತಮ್; 58.1), 8–281 (ರೋನಿತ್ ಮೋರೆ; 69.1), 9–281(ಬಿ.ಆರ್. ಶರತ್; 70.3), 10–304 (ವಿಜಯಕುಮಾರ್ ವೈಶಾಖ; 74.4) ಬೌಲಿಂಗ್‌: ದಿವೇಶ್ ಪಠಾಣಿಯಾ 20–3–86–5, ನಿಶಾನ್ ಸಿಂಗ್ 17–3–66–0, ಅರ್ಪಿತ್ ಗುಲೇರಿಯಾ 16–1–70–1, ರಾಹುಲ್ ಸಿಂಗ್ 11–1–39–1, ಪುಳ್ಕಿತ್ ನಾರಂಗ್ 10.4–1–40–3 ಸರ್ವಿಸಸ್ ಮೊದಲ ಇನಿಂಗ್ಸ್ 4ಕ್ಕೆ96 (28 ಓವರ್‌) ಶುಭಂ ಸಿ ನಿಕಿನ್ ಬಿ ವಿದ್ವತ್ 8 (3ಎ, 4X2), ರವಿ ಚೌಹಾಣ್ ಬ್ಯಾಟಿಂಗ್ 39 (78ಎ, 4X5), ರಾಹುಲ್ ಸಿಂಗ್ ಬಿ ವಿದ್ವತ್ 0 (2ಎ), ಅನ್ಷುಲ್ ಸಿ ಶರತ್ ಬಿ ವಿದ್ವತ್ 0 (3ಎ), ರಜತ್ ಪಲೀವಾಲ ಬ್ಯಾಟಿಂಗ್ 42 (69ಎ, 4X7) ದೇವೆಂದ್ರ ಸಿ ಶ್ರೇಯಸ್ ಬಿ ವೈಶಾಖ 6 (13ಎ, 4X1) ಇತರೆ 1 (ಲೆಗ್‌ಬೈ 1) ವಿಕೆಟ್ ಪತನ: 1–8 (ಶುಭಂ ರೊಹಿಲಿಯಾ; 0.3), 2–8 (ರಾಹುಲ್ ಸಿಂಗ್ ಗೆಹಲೋತ್; 0.5), 3–12 (ಅನ್ಷುಲ್ ಗುಪ್ತಾ; 2.2), 4–78 (ದೇವೆಂದ್ರ ಲೊಹಚಾಬ್ 22.6) ಬೌಲಿಂಗ್‌: ವಿದ್ವತ್ ಕಾವೇರಪ್ಪ 10–2–29–3, ವಿಜಯಕುಮಾರ್ ವೈಶಾಖ 10–0–38–1, ರೋನಿತ್ ಮೋರೆ 6–2–19–0, ಕೃಷ್ಣಪ್ಪ ಗೌತಮ್ 2–0–9–0. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.