ಅಂಧರ ವಿಶ್ವಕಪ್ ಕ್ರಿಕೆಟ್‌: ಭಾರತಕ್ಕೆ ಜಯ ಕಟಕ್‌ (ಪಿಟಿಐ): ಭಾರತ ತಂಡವು ಅಂಧರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಮೂರನೇ ಜಯ ಸಂಪಾದಿಸಿತು. ಮಂಗಳವಾರ ಇಲ್ಲಿಯ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡಕ್ಕೆ ಸೋಲುಣಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 4 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿತು. ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಮೊಹಮ್ಮದ್ ಆಶಿಕುರ್ ರೆಹಮಾನ್‌ (75) ಮತ್ತು ಮೊಹಮ್ಮದ್ ಆರಿಫ್‌ (33) ಅವರು 84 ರನ್‌ ಸೇರಿಸಿ ಬಲ ತುಂಬಿದರು. ಗುರಿ ಬೆನ್ನತ್ತಿದ ಭಾರತದ ಪರ ಟಿ. ದುರ್ಗಾರಾವ್‌ (73) ಮತ್ತುನಕುಲ ಬಡಾನಾಯಕ್‌ (36) ಮೊದಲ ವಿಕೆಟ್‌ ಜೊತೆಯಾಟಕ್ಕೆ 95 ರನ್‌ ಸೇರಿಸಿ ತಂಡದ ಜಯವನ್ನು ಸುಲಭಗೊಳಿಸಿದರು. 13.1 ಓವರ್‌ಗಳಲ್ಲಿ ಭಾರತ ಜಯದ ಗುರಿ ತಲುಪಿತು. ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 166 (ಮೊಹಮ್ಮದ್ ಆಶಿಕುರ್ ರೆಹಮಾನ್‌ 75, ಮೊಹಮ್ಮದ್ ಆರಿಫ್‌ 33). ಭಾರತ 13.1 ಓವರ್‌ಗಳಲ್ಲಿ 3 ವಿಕೆಟ್‌ಗೆ 167 (ಟಿ. ದುರ್ಗಾರಾವ್‌ 73, ನಕುಲ ಬಡಾನಾಯಕ್‌ 36). ಫಲಿತಾಂಶ: ಭಾರತ ತಂಡಕ್ಕೆ ಏಳು ವಿಕೆಟ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.