ಕ್ರಿಕೆಟ್‌ ಟೆಸ್ಟ್‌: ಆಸ್ಟ್ರೇಲಿಯಾ ನೆರವಿಗೆ ಹೆಡ್‌ ಬ್ರಿಸ್ಬೇನ್‌ (ಎಪಿ): ಮಧ್ಯಮ ಕ್ರಮಾಂಕದ ಬ್ಯಾಟರ್‌ ಟ್ರ್ಯಾವಿಸ್‌ ಹೆಡ್‌ ಅವರ ಅಜೇಯ ಅರ್ಧಶತಕದ (ಬ್ಯಾಟಿಂಗ್‌ 78) ನೆರವಿನಿಂದ ಆಸ್ಟ್ರೇಲಿಯಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಮರುಹೋರಾಟ ನಡೆಸಿದೆ. ಬ್ರಿಸ್ಬೇನ್‌ನಲ್ಲಿ ಶನಿವಾರ ಆರಂಭವಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯಾ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡು 145 ರನ್‌ ಗಳಿಸಿದೆ. ಇನಿಂಗ್ಸ್‌ ಹಿನ್ನಡೆ ತಪ್ಪಿಸಲು ಆತಿಥೇಯರಿಗೆ ಇನ್ನೂ 7 ರನ್‌ಗಳು ಬೇಕಿದೆ. ಆಸ್ಟ್ರೇಲಿಯಾ ತಂಡ 27 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡಿತ್ತು. ಸ್ಟೀವ್‌ ಸ್ಮಿತ್‌ ಮತ್ತು ಹೆಡ್‌ ಅವರು ನಾಲ್ಕನೇ ವಿಕೆಟ್‌ಗೆ 117 ರನ್‌ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಇದಕ್ಕೂ ಮುನ್ನ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಮಿಚೆಲ್‌ ಸ್ಟಾರ್ಕ್‌ (41ಕ್ಕೆ 3) ಮತ್ತು ನೇಥನ್‌ ಲಿಯೊನ್‌ (14ಕ್ಕೆ 3) ಅವರ ದಾಳಿಗೆ ನಲುಗಿದ ಪ್ರವಾಸಿ ತಂಡ ಅಲ್ಪ ಮೊತ್ತಕ್ಕೆ ಆಲೌಟಾಯಿತು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 48.2 ಓವರ್‌ಗಳಲ್ಲಿ 152 (ಕೈಲ್‌ ವೆರೆಯ್ನ್‌ 68, ತೆಂಬಾ ಬವುಮಾ 38, ಮಿಚೆಲ್‌ ಸ್ಟಾರ್ಕ್‌ 41ಕ್ಕೆ 3, ನೇಥನ್‌ ಲಿಯೊನ್‌ 14ಕ್ಕೆ 3, ಪ್ಯಾಟ್‌ ಕಮಿನ್ಸ್‌ 35ಕ್ಕೆ 2, ಸ್ಕಾಟ್‌ ಬೋಲಂಡ್‌ 28ಕ್ಕೆ 2) ಆಸ್ಟ್ರೇಲಿಯಾ 33.1 ಓವರ್‌ಗಳಲ್ಲಿ 5 ವಿಕೆಟ್‌ಗೆ 145 (ಸ್ಟೀವ್‌ ಸ್ಮಿತ್‌ 36, ಟ್ರ್ಯಾವಿಸ್‌ ಹೆಡ್‌ ಬ್ಯಾಟಿಂಗ್‌ 78, ಕಗಿಸೊ ರಬಾಡ 50ಕ್ಕೆ 2, ಎನ್ರಿಕ್‌ ನಾರ್ಕಿಯಾ 37ಕ್ಕೆ 2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.