ಕ್ರಿಕೆಟ್‌: ಮಂತ್ರಿ, ನಾಪಾ ವ್ಯಾಲಿಗೆ ಗೆಲುವು ಬೆಂಗಳೂರು: ಮಂತ್ರಿ ಕೋರ್ಟ್‌ಯಾರ್ಡ್‌ ಮತ್ತು ನಾಪಾ ವ್ಯಾಲಿ ಅಪಾರ್ಟ್‌ಮೆಂಟ್‌ ತಂಡಗಳು ಚೇಂಜ್‌ಮೇಕರ್ಸ್‌ ಆಫ್‌ ಕನಕಪುರ ರೋಡ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಆಯೋಜಿಸಿರುವ ‘ಫೆಡರೇಷನ್‌ ಕ್ರಿಕೆಟ್‌ ಲೀಗ್‌’ ನಲ್ಲಿ ಗೆಲುವು ಪಡೆದವು. ಕನಕಪುರ ರಸ್ತೆಯ ಜುಡಿಷಿಯಲ್‌ ಬಡಾವಣೆ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ನಾಪಾ ವ್ಯಾಲಿ ತಂಡ 27 ರನ್‌ಗಳಿಂದ ಬಾಲಾಜಿ ಬ್ಲಾಸ್ಟರ್ಸ್‌ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ನಾಪಾ ವ್ಯಾಲಿ ನಿಗದಿತ ಆರು ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 81 ರನ್‌ ಗಳಿಸಿತು. ಬ್ಲಾಸ್ಟರ್ಸ್‌ ತಂಡ 7 ವಿಕೆಟ್‌ಗೆ 54 ರನ್‌ ಪೇರಿಸಿತು. ಇನ್ನೊಂದು ಪಂದ್ಯದಲ್ಲಿ ಮಂತ್ರಿ ಕೋರ್ಟ್‌ಯಾರ್ಡ್‌ ತಂಡ 9 ವಿಕೆಟ್‌ಗಳಿಂದ ಬಿಸಿಸಿಎಚ್‌ಎಸ್‌ ರೇಡರ್ಸ್‌ ತಂಡವನ್ನು ಸೋಲಿಸಿತು. ಇತರ ಪಂದ್ಯಗಳಲ್ಲಿ ವಿ.ಪಿ. ವಾರಿಯರ್ಸ್‌ 23 ರನ್‌ಗಳಿಂದ ಡ್ರೀಮ್‌ಟೀಂ ವಿರುದ್ಧ; ಜುಡಿಷಿಯಲ್‌ ಬಡಾವಣೆ ತಂಡ 11 ರನ್‌ಗಳಿಂದ ಬ್ರಿಗೇಡ್‌ ಒಮೆಗಾ ವಿರುದ್ಧ; ಎಚ್‌.ಎಂ. ತಾಂಬೂರಿಯನ್‌ 14 ರನ್‌ಗಳಿಂದ ಎಸ್‌ವಿ ಲಕ್ಸೂರಿಯಾ ವಿರುದ್ಧ ಹಾಗೂ ಬ್ರಿಗೇಡ್‌ ಮಿಡೋಸ್‌ 24 ರನ್‌ಗಳಿಂದ ಸುರಭಿ ಸ್ಮ್ಯಾಷ್‌ ವಿರುದ್ಧವೂ ಗೆಲುವು ಪಡೆದವು. ಸೆಮಿಫೈನಲ್‌ ಹಾಗೂ ಫೈನಲ್‌ ಭಾನುವಾರ ನಡೆಯಲಿದೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಟೂರ್ನಿಯನ್ನು ಉದ್ಘಾಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.