ಕ್ರಿಕೆಟ್‌ ಟೆಸ್ಟ್‌: ಆಸ್ಟ್ರೇಲಿಯಾಕ್ಕೆ ಮಣಿದ ದಕ್ಷಿಣ ಆಫ್ರಿಕಾ ಬ್ರಿಸ್ಬೇನ್‌ (ಎಪಿ): ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದ ಆಸ್ಟ್ರೇಲಿಯಾದ ಬೌಲರ್‌ಗಳು ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ತಮ್ಮ ತಂಡಕ್ಕೆ ಆರು ವಿಕೆಟ್‌ಗಳ ಜಯ ತಂದುಕೊಟ್ಟರು. ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಎರಡು ದಿನಗಳಲ್ಲೇ ಮುಕ್ತಾಯಗೊಂಡಿತು. ಗಾಬಾ ಕ್ರೀಡಾಂಗಣದ ಪಿಚ್‌ ಬೌಲರ್‌ಗಳಿಗೆ ಪೂರ್ಣ ನೆರವು ನೀಡಿದ್ದರಿಂದ ಒಟ್ಟು 34 ವಿಕೆಟ್‌ಗಳು ಬಿದ್ದವು. 5 ವಿಕೆಟ್‌ಗೆ 145 ರನ್‌ಗಳಿಂದ ಎರಡನೇ ದಿನವಾದ ಭಾನುವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಆಲೌಟಾಯಿತು. 66 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 99 ರನ್‌ಗಳಿಗೆ ಆಲೌಟಾಯಿತು. ಪ್ಯಾಟ್‌ ಕಮಿನ್ಸ್‌ 42 ರನ್‌ಗಳಿಗೆ ಐದು ವಿಕೆಟ್‌ ಪಡೆದರು. ಗೆಲುವಿಗೆ 34 ರನ್‌ ಗಳಿಸಬೇಕಿದ್ದ ಆಸ್ಟ್ರೇಲಿಯಾ, ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ನಾಲ್ಕೂ ವಿಕೆಟ್‌ಗಳನ್ನು ಕಗಿಸೊ ರಬಾಡ ಪಡೆದರು. ‘ಅಪಾಯಕಾರಿ’ ಪಿಚ್‌: ಗಾಬಾ ಕ್ರೀಡಾಂಗಣದ ಪಿಚ್‌ ಆಟಗಾರರಿಗೆ ‘ಅಪಾಯಕಾರಿ’ಯಾಗಿತ್ತು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್‌ ಎಲ್ಗರ್‌ ಟೀಕಿಸಿದ್ದಾರೆ. ‘ಎರಡು ದಿನಗಳಲ್ಲಿ 34 ವಿಕೆಟ್‌ಗಳು ಬಿದ್ದಿವೆ. ಟೆಸ್ಟ್‌ ಪಂದ್ಯಕ್ಕೆ ಯೋಗ್ಯವಾದ ಪಿಚ್‌ ಇದಲ್ಲ’ ಎಂದು ಪಂದ್ಯದ ಬಳಿಕ ಅಸಮಾಧಾನ ಹೊರಹಾಕಿದ್ದಾರೆ. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 48.2 ಓವರ್‌ಗಳಲ್ಲಿ 152. ಆಸ್ಟ್ರೇಲಿಯಾ 50.3 ಓವರ್‌ಗಳಲ್ಲಿ 218 (ಟ್ರ್ಯಾವಿಸ್‌ ಹೆಡ್‌ 92, ಅಲೆಕ್ಸ್‌ ಕೇರಿ ಔಟಾಗದೆ 22, ಕಗಿಸೊ ರಬಾಡ 76ಕ್ಕೆ 4, ಮಾರ್ಕೊ ಜೆನ್ಸೆನ್‌ 32ಕ್ಕೆ 3) ಎರಡನೇ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 37.4 ಓವರ್‌ಗಳಲ್ಲಿ 99 (ತೆಂಬಾ ಬವುಮಾ 29, ಕಾಯಾ ಜೊಂಡೊ ಔಟಾಗದೆ 36, ಪ್ಯಾಟ್ ಕಮಿನ್ಸ್‌ 42ಕ್ಕೆ 5, ಮಿಚೆಲ್‌ ಸ್ಟಾರ್ಕ್‌ 26ಕ್ಕೆ 2, ಸ್ಕಾಟ್‌ ಬೋಲಂಡ್‌ 14ಕ್ಕೆ 2) ಆಸ್ಟ್ರೇಲಿಯಾ: 7.5 ಓವರ್‌ಗಳಲ್ಲಿ 4 ವಿಕೆಟ್‌ಗೆ 35 (ಮಾರ್ನಸ್‌ ಲಾಬುಶೇನ್‌ ಔಟಾಗದೆ 5, ಸ್ಟೀವ್‌ ಸ್ಮಿತ್‌ 6, ಕಗಿಸೊ ರಬಾಡ 13ಕ್ಕೆ 4) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 6 ವಿಕೆಟ್ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.