ಕೂಚ್ ಬೆಹಾರ್ ಟ್ರೋಫಿ: ಯಶೋವರ್ಧನ್ ಅಮೋಘ ಶತಕ ಮೈಸೂರು: ನಾಯಕ ಯಶೋವರ್ಧನ ಪರಂತಪ್ ಸಿಡಿಸಿದ ಅಮೋಘ ಶತಕದ (114 ರನ್) ಬಲದಿಂದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕಿತು. ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಚ್ ಬೆಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜ್ಯ ತಂಡವು ಭಾನುವಾರ 112.1 ಓವರ್‌ಗಳಲ್ಲಿ 273 ರನ್ ಗಳಿಸಿತು. ನಾಯಕನ ಆಟವಾಡಿದ ಯಶೋವರ್ಧನ್, ಹಾರ್ದಿಕ್ ರಾಜ್ (66) ಅವರೊಂದಿಗೆ ಇನ್ನಿಂಗ್ಸ್ ಕಟ್ಟಿದರು. ಕೊನೆಯವರಾಗಿ ಔಟ್ ಆದರು. ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡಕ್ಕೆ ಕರ್ನಾಟಕದ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಮಾನವ್ ಚೋತಾನಿ (80) ಧ್ರುವ ಪ್ರಭಾಕರ್‌ಗೆ ವಿಕೆಟ್ ಒಪ್ಪಿಸಿದರು. ಕೆಎಸ್‌ಸಿಎ ತಂಡದ ಆದಿತ್ಯ ನಾಯರ್ (31ಕ್ಕೆ 2), ಧ್ರುವ್ ಪ್ರಭಾಕರ್ (39ಕ್ಕೆ 2) ಸೌರಾಷ್ಟ್ರದ ಬ್ಯಾಟಿಂಗ್ ಬೆನ್ನೆಲುಬು ಮುರಿದರು‌. ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿದೆ. ಸಂಕ್ಷಿಪ್ತ ಸ್ಕೋರು: ಕರ್ನಾಟಕ ಮೊದಲ ಇನಿಂಗ್ಸ್: 112.1 ಓವರ್‌ಗಳಲ್ಲಿ 273 (ಯಶೋವರ್ಧನ್ ಪರಂತಪ್ 114, ಹಾರ್ದಿಕ್ ರಾಜ್ 66, ಟಿ.ಜಡೇಜ 98ಕ್ಕೆ 4) ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 7 ವಿಕೆಟ್ ನಷ್ಟಕ್ಕೆ 197 ರನ್ (ಮಾನವ್ ಚೋತಾನಿ 80, ಆದಿತ್ಯ ನಾಯರ್ 31ಕ್ಕೆ 2, ಧ್ರುವ್ ಪ್ರಭಾಕರ್ 39ಕ್ಕೆ 2). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.