| ಮಳೆಯಿಂದಾಗಿ ಫಲಿತಾಂಶ ಕಾಣದ ಪಂದ್ಯ; ಸೆಮಿಫೈನಲ್‌ಗೆ ಭಾರತ ಹಾಂಗ್‌ಝೌ(ಚೀನಾ): ಏಷ್ಯಾ ಕ್ರೀಡಾಕೂಟದ ಮಹಿಳೆಯರ ಕ್ರಿಕೆಟ್‌ ಟೂರ್ನಿಯ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದೆ. ಆದಾಗ್ಯೂ ಭಾರತ ತಂಡ ಸೆಮಿಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಪಿಂಗ್‌ಫೆಂಗ್‌ ಕ್ಯಾಂಪಸ್‌ ಕ್ರಿಕೆಟ್‌ ಮೈದಾನದಲ್ಲಿ ಇಂದು (ಗುರುವಾರ) ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಟೀಂ ಇಂಡಿಯಾಗೆ ಸ್ಮೃತಿ ಮಂದಾನ (27) ಹಾಗೂ ಶೆಫಾಲಿ ವರ್ಮಾ ಜೋಡಿ ಮೊದಲ ವಿಕೆಟ್‌ಗೆ 57 ರನ್ ಕೆಲಹಾಕಿ ಉತ್ತಮ ಆರಂಭ ನೀಡಿತು. ಭಾರತ 5.4 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು 60 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದಾಗಿ ಪಂದ್ಯವನ್ನು 15 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಅಬ್ಬರದ ಬ್ಯಾಟಿಂಗ್ ನಡೆಸಿದ ಶೆಫಾಲಿ 39 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳಿದ್ದ 67 ರ‌ನ್‌ ಸಿಡಿಸಿ ಔಟಾದರು. ಅವರಿಗೆ ಉತ್ತಮ ಸಹಕಾರ ನೀಡಿದ ಜೆಮಿಯಾ ರಾಡ್ರಿಗಸ್‌ 29 ಎಸೆತಗಳಲ್ಲಿ 47 ರನ್ ಬಾರಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿಗಳಿದ್ದವು. ಕೇವಲ 7 ಎಸೆತಗಳನ್ನು ಎದುರಿಸಿದ ರಿಚಾ ಘೋಷ್‌, 3 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 21 ರನ್‌ ಚಚ್ಚಿದರು. ಹೀಗಾಗಿ ಸ್ಮೃತಿ ಮಂದಾನ ಪಡೆ ನಿಗದಿತ ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು. ಬೃಹತ್‌ ಗುರಿ ಎದುರು ಮಲೇಷ್ಯಾ ಇನಿಂಗ್ಸ್ ಆರಂಭಿಸುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿತು. ಎರಡನೇ ಇನಿಂಗ್ಸ್‌ನಲ್ಲಿ 0.2 ಓವರ್‌ಗಳ ಆಟವಷ್ಟೇ ನಡೆಯಿತು. ಭಾರಿ ಮಳೆಯ ಕಾರಣ ಪಂದ್ಯವು ಫಲಿತಾಂಶವಿಲ್ಲದೆ ರದ್ದಾಯಿತಾದರೂ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಸೆಮಿಫೈನಲ್‌ ಹಣಾಹಣಿಯು ಇದೇ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್‌ 24ರಂದು ನಡೆಯಲಿದೆ. ತಂಡ ಮುನ್ನಡೆಸಿದ ಸ್ಮೃತಿ ಮಂದಾನ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಪಂದ್ಯದಲ್ಲಿ ಅಶಿಸ್ತಿನ ವರ್ತನೆ ತೋರಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಎರಡು ಪಂದ್ಯಗಳಿಗೆ ಅಮಾನತು ಮಾಡಲಾಗಿದೆ. ಹೀಗಾಗಿ ಎಡಗೈ ಬ್ಯಾಟರ್‌ ಸ್ಮೃತಿ ಮಂದಾನ, ತಂಡವನ್ನು ಮುನ್ನಡೆಸಿದರು. 🌧️ ' ! # 👏👏 ▶️://./c5tw7bD88x#IndiaAtAG22 ../Wrb3GeAStw ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.