ದೆಹಲಿ ತಂಡದ ಆಯ್ಕೆಗಾರ ಸಿದಾನಾ ಸಭಾತ್ಯಾಗ ನವದೆಹಲಿ (ಪಿಟಿಐ): ದೆಹಲಿ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯ ಮಯಂಕ್ ಸಿದಾನಾ ಅವರು ಸಭಾತ್ಯಾಗ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ದೆಹಲಿ ತಂಡವು ಸೌರಾಷ್ಟ್ರದ ವಿರುದ್ಧ ಆಡುತ್ತಿದೆ. ಮೊದಲ ದಿನವಾದ ಮಂಗಳವಾರದ ಆಟದಲ್ಲಿ ದೆಹಲಿ ತಂಡವು 133 ರನ್‌ಗಳಿಗೆ ಆಲೌಟ್ ಆಗಿತ್ತು. ಇದರ ಹಿನ್ನೆಲೆಯಲ್ಲಿ ರಾಜ್‌ಕೋಟ್ ಹೋಟೆಲ್‌ನಲ್ಲಿ ನಡೆದ ಆಯ್ಕೆಗಾರರ ಸಭೆಯಲ್ಲಿ ಮಯಂಕ್ ಹೊರನಡೆದರು. ಈ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಗಗನ್ ಖೋಡಾ ಮತ್ತು ಕಾರ್ಯದರ್ಶಿ ಸಿದ್ಧಾಂತ್ ಸಾಹಿಬ್ ಸಿಂಗ್ ಹಾಜರಿದ್ದರು. 25 ವರ್ಷದೊಳಗಿನವರ ತಂಡವನ್ನು ಆಯ್ಕೆ ಮಾಡುವ ಕುರಿತು ಇಲ್ಲಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಅಲ್ಲದೇ ದೆಹಲಿ ತಂಡದ ಮಧ್ಯಮ ಕ್ರಮಾಂಕದ ಪರಿಣತ ಬ್ಯಾಟರ್ ಆಯುಷ್ ಬದೋನಿ ಅವರಿಗೆ ಇನಿಂಗ್ಸ್‌ ಆರಂಭಿಸಲು ಬಡ್ತಿ ನೀಡಿದ ಮುಖ್ಯ ಕೋಚ್ ಅಭಯ್ ಶರ್ಮಾ ಅವರ ನಿರ್ಧಾರವು ಅಸಮಾಧಾನಕ್ಕೆ ಕಾರಣವೆನ್ನಲಾಗಿದೆ. 19 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿತ್ತು. ಆರಂಭಿಕ ಬ್ಯಾಟರ್‌ಗಳಾದ ವೈಭವ್ ಶರ್ಮಾ ಮತ್ತು ಸಲೀಲ್ ಮಲ್ಹೋತ್ರಾ ಅವರನ್ನು 11ರ ಬಳಗಕ್ಕೆ ಆಯ್ಕೆ ಮಾಡಿರಲಿಲ್ಲ. ಆದ್ದರಿಂದ ಅವರು ಹೋಟೆಲ್‌ನಲ್ಲಿಯೇ ಉಳಿದಿದ್ದಾರೆ. ಕ್ರೀಡಾಂಗಣದ ಡ್ರೆಸಿಂಗ್‌ ರೂಮ್‌ನಲ್ಲಿ ಒಂದು ತಂಡದ 15 ಆಟಗಾರರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.