ಬಾಕ್ಸಿಂಗ್ ಡೇ ಟೆಸ್ಟ್: ಸರಣಿ ಕೈವಶದತ್ತ ಆಸ್ಟ್ರೇಲಿಯಾ ಚಿತ್ತ ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯಾ ತಂಡವು ಸೋಮವಾರ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಜಯಿಸುವ ಛಲದಲ್ಲಿದೆ. ಅದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಬ್ರಿಸ್ಬೇನ್‌ನ ಗಾಬಾದಲ್ಲಿ ಎರಡೇ ದಿನಗಳಲ್ಲಿ ಮುಗಿದಿದ್ದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಅದರ ನಂತರ ಅಲ್ಲಿಯ ಪಿಚ್‌ ಅನ್ನು ಕಳಪೆ ಎಂದು ಐಸಿಸಿ ಘೋಷಿಸಿತ್ತು. ಮೆಲ್ಬರ್ನ್‌ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವ ಛಲದಲ್ಲಿ ಪ್ರವಾಸಿ ತಂಡವೂ ಇದೆ. ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಲು ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಸರಣಿಯಲ್ಲಿ ಜಯಿಸುವ ಅಗತ್ಯವೂ ಇದೆ. ಆಸ್ಟ್ರೇಲಿಯಾ ತಂಡಕ್ಕೆ ವೇಗಿ ಸ್ಕಾಟ್ ಬೊಲೆಂಡ್ ಮರಳಿದ್ದಾರೆ. ಇದರಿಂದಾಗಿ ತಂಡದ ಬೌಲಿಂಗ್ ವಿಭಾಗವು ಮತ್ತಷ್ಟು ಬಲಗೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ಗಳು ಲಯಕ್ಕೆ ಮರಳಿದರೆ ಆತಿಥೇಯ ಬೌಲಿಂಗ್ ಪಡೆಯ ದಾಳಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ. ನಾಯಕ ಡೀನ್ ಎಲ್ಗರ್, ಸರೆನ್ ಎರ್ವಿ, ವ್ಯಾನ್ ಡರ್ ಡಸೆ ಹಾಗೂ ತೆಂಬಾ ಬವುಮಾ ಫಾರ್ಮ್ ಕಂಡುಕೊಳ್ಳುವ ನಿರೀಕ್ಷೆ ಇದೆ. ಆದರೆ ಅಮೋಘ ಲಯದಲ್ಲಿರುವ ಆಸ್ಟ್ರೇಲಿಯಾದ ಬ್ಯಾಟರ್‌ಗಳಾದ ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಷೇನ್, ಉಸ್ಮಾನ್ ಖ್ವಾಜಾ ಮತ್ತುಟ್ರಾವಿಸ್ ಹೆಡ್ ಅವರನ್ನು ನಿಯಂತ್ರಿಸುವ ಹೊಣೆ ಪ್ರವಾಸಿ ತಂಡದ ಅನುಭವಿ ಬೌಲರ್‌ಗಳಾದ ಕಗಿಸೊ ರಬಾಡ ಮತ್ತು ಲುಂಗಿ ಗಿಡಿ ಮುಂದಿದೆ. ದಿನದಾಟ ಆರಂಭ: ಬೆಳಿಗ್ಗೆ 5 (ಭಾರತೀಯ ಕಾಲಮಾನ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.