ಟೆಸ್ಟ್‌: ದಕ್ಷಿಣ ಆಫ್ರಿಕಾ ಮತ್ತೆ ಬ್ಯಾಟಿಂಗ್ ವೈಫಲ್ಯ ಮೆಲ್ಬರ್ನ್‌ (ಎಪಿ): ಕ್ರಿಸ್‌ಮಸ್‌ ಮರುದಿನ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನೆರೆದಿದ್ದ 60 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಮಿಂಚಿನ ಬೌಲಿಂಗ್‌ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ಕ್ಯಾಮರಾನ್‌ ಗ್ರೀನ್‌ ಅವರು ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು. ಗ್ರೀನ್‌ (27ಕ್ಕೆ 5) ಅವರ ಚುರುಕಿನ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದ ಮೊದಲ ದಿನ 189 ರನ್‌ಗಳಿಗೆ ಆಲೌಟಾಯಿತು. ಸೋಮವಾರದ ಆಟದ ಅಂತ್ಯಕ್ಕೆ ಆತಿಥೇಯ ತಂಡ 12 ಓವರ್‌ಗಳಲ್ಲಿ 1 ವಿಕೆಟ್‌ಗೆ 45 ರನ್‌ ಗಳಿಸಿದೆ. ಉಸ್ಮಾನ್‌ ಖ್ವಾಜಾ (1) ಬೇಗನೇ ಔಟಾದರೆ, ಡೇವಿಡ್‌ ವಾರ್ನರ್‌ (ಬ್ಯಾಟಿಂಗ್‌ 32) ಮತ್ತು ಮಾರ್ನಸ್‌ ಲಾಬುಷೇನ್‌ (ಬ್ಯಾಟಿಂಗ್ 5) ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿಕೊಂಡಿದ್ದಾರೆ. ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್‌ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಸ್ಕಾಟ್‌ ಬೋಲಂಡ್‌ ಮತ್ತು ಮಿಷೆಲ್ ಸ್ಟಾರ್ಕ್‌ ಅವರು ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಪ್ರವಾಸಿ ತಂಡ 67 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಜತೆಯಾದ ಕೈಲ್‌ ವೆರೆಯ್ನ್‌ (52) ಮತ್ತು ಮಾರ್ಕೊ ಜನ್ಸೆನ್‌ (59) ಆರನೇ ವಿಕೆಟ್‌ಗೆ 112 ರನ್‌ಗಳನ್ನು ಸೇರಿಸಿ ತಂಡಕ್ಕೆ ಆಸರೆಯಾದರು. ಇವರಿಬ್ಬರನ್ನೂ ಪೆವಿಲಿಯನ್‌ಗಟ್ಟಿದ ಗ್ರೀನ್‌, ಆಸ್ಟ್ರೇಲಿಯಾಕ್ಕೆ ಮೇಲುಗೈ ತಂದಿತ್ತರು. ದಕ್ಷಿಣ ಆಫ್ರಿಕಾದ ಕೊನೆಯ ಕ್ರಮಾಂಕದ ಬ್ಯಾಟರ್‌ಗಳು ಗ್ರೀನ್‌ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ಎಡವಿದರು. 10 ರನ್‌ಗಳಿಗೆ ಕೊನೆಯ ಐದು ವಿಕೆಟ್‌ಗಳು ಬಿದ್ದವು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 68.4 ಓವರ್‌ಗಳಲ್ಲಿ 189 (ಡೀನ್‌ ಎಲ್ಗರ್‌ 26, ಕೈಲ್‌ ವೆರೆಯ್ನ್‌ 52, ಮಾರ್ಕೊ ಜನ್ಸೆನ್‌ 59, ಕ್ಯಾಮರಾನ್‌ ಗ್ರೀನ್‌ 27ಕ್ಕೆ 5, ಮಿಚೆಲ್‌ ಸ್ಟಾರ್ಕ್‌ 39ಕ್ಕೆ 2) ಆಸ್ಟ್ರೇಲಿಯಾ 12 ಓವರ್‌ಗಳಲ್ಲಿ 1 ವಿಕೆಟ್‌ಗೆ 45 (ಡೇವಿಡ್‌ ವಾರ್ನರ್‌ ಬ್ಯಾಟಿಂಗ್‌ 32, ಮಾರ್ನಸ್‌ ಲಾಬುಷೇನ್‌ ಬ್ಯಾಟಿಂಗ್ 5) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.