ಕ್ರಿಕೆಟ್‌ ಟೆಸ್ಟ್‌: ಪಾಕಿಸ್ತಾನ ಉತ್ತಮ ಮೊತ್ತ- ಬಾಬರ್‌ ಶತಕ ಸಂಭ್ರಮ ಕರಾಚಿ (ರಾಯಿಟರ್ಸ್‌): ನಾಯಕ ಬಾಬರ್‌ ಅಜಂ (ಬ್ಯಾಟಿಂಗ್‌ 160) ಗಳಿಸಿದ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ ತಂಡ, ನ್ಯೂಜಿಲೆಂಡ್‌ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆಯಿಟ್ಟಿದೆ. ಕರಾಚಿ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ ಪಾಕಿಸ್ತಾನ ಐದು ವಿಕೆಟ್‌ಗಳ ನಷ್ಟಕ್ಕೆ 317 ರನ್‌ ಗಳಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಆತಿಥೇಯ ತಂಡ 110 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ಆದರೆ ಸರ್ಫ್‌ರಾಜ್‌ ಅಹ್ಮದ್‌ (86) ಅವರೊಂದಿಗೆ ಸೇರಿಕೊಂಡು ಬಾಬರ್‌, ತಂಡವನ್ನು ಕುಸಿತದಿಂದ ಪಾರು ಮಾಡಿದರು. ಈ ಜೋಡಿ ಐದನೇ ವಿಕೆಟ್‌ಗೆ 196 ರನ್‌ ಕಲೆಹಾಕಿತು. 277 ಎಸೆತಗಳನ್ನು ಎದುರಿಸಿದ ಬಾಬರ್‌, 15 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 9ನೇ ಶತಕ ಪೂರೈಸಿದ ಅವರು ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿಕೊಂಡಿದ್ದಾರೆ. 12 ರನ್‌ ಗಳಿಸಿದ್ದಾಗ ಬಾಬರ್‌ಗೆ ಜೀವದಾನ ಲಭಿಸಿತ್ತು. ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಮೈಕಲ್‌ ಬ್ರೇಸ್‌ವೆಲ್‌ ಅವರ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿದ್ದ ಡೆರಿಲ್‌ ಮಿಚೆಲ್‌ ಸುಲಭ ಕ್ಯಾಚ್‌ ಕೈಚೆಲ್ಲಿದ್ದರು. ಆ ತಪ್ಪಿಗೆ ನ್ಯೂಜಿಲೆಂಡ್‌ ಭಾರಿ ಬೆಲೆ ತೆರಬೇಕಾಯಿತು. ಬ್ರೇಸ್‌ವೆಲ್‌ ಅವರು ಪಾಕ್‌ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇಮಾಮ್‌ ಉಲ್‌ ಹಕ್‌ (24) ಮತ್ತು ಶಾನ್‌ ಮಸೂದ್‌ (3) ಬೇಗನೇ ಔಟಾದರು. ಅಬ್ದುಲ್ಲಾ ಶಫೀಕ್‌ (7) ಅವರ ವಿಕೆಟ್‌ ಅಜಾಜ್‌ ಪಟೇಲ್‌ ಪಾಲಾಯಿತು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಪಾಕಿಸ್ತಾನ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 317 (ಇಮಾಮ್‌ ಉಲ್‌ ಹಕ್‌ 24, ಬಾಬರ್‌ ಅಜಂ ಬ್ಯಾಟಿಂಗ್‌ 161, ಸವೂದ್‌ ಶಕೀಲ್‌ 22, ಸರ್ಫ್‌ರಾಜ್‌ ಅಹ್ಮದ್‌ 86, ಅಜಾಜ್‌ ಪಟೇಲ್‌ 91ಕ್ಕೆ 2, ಮೈಕಲ್ ಬ್ರೇಸ್‌ವೆಲ್‌ 61ಕ್ಕೆ 2, ಟಿಮ್ ಸೌಥಿ 51ಕ್ಕೆ 1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.