ಕ್ರಿಕೆಟ್‌ ಟೆಸ್ಟ್‌: ಪಾಕ್‌ ತಂಡದ ಸಲ್ಮಾನ್‌ ಶತಕ- ನ್ಯೂಜಿಲೆಂಡ್‌ ದಿಟ್ಟ ಉತ್ತರ ಕರಾಚಿ (ಎಪಿ): ಟಾಮ್‌ ಲಥಾಮ್‌ ಮತ್ತು ಡೆವೊನ್‌ ಕಾನ್ವೆ ಅವರ ಅಜೇಯ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದೆ. ಕರಾಚಿ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ ನ್ಯೂಜಿಲೆಂಡ್‌, ವಿಕೆಟ್ ನಷ್ಟವಿಲ್ಲದೆ 165 ರನ್‌ ಗಳಿಸಿದೆ. ಲಥಾಮ್‌ (ಅಜೇಯ 78, 126 ಎ.) ಮತ್ತು ಕಾನ್ವೆ (ಅಜೇಯ 82, 156 ಎ.) ಅವರು ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿದ್ದಾರೆ. ಕಿವೀಸ್‌ನ ಆರಂಭಿಕ ಬ್ಯಾಟರ್‌ಗಳು ಪಾಕ್‌ ತಂಡದ ವೇಗ ಮತ್ತು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಮೊದಲ ಇನಿಂಗ್ಸ್‌ ಹಿನ್ನಡೆ ತಪ್ಪಿಸಲು ನ್ಯೂಜಿಲೆಂಡ್‌ ಇನ್ನೂ 273 ರನ್‌ ಗಳಿಸಬೇಕು. ಕಾನ್ವೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ 19ನೇ ಇನಿಂಗ್ಸ್‌ನಲ್ಲಿ 1,000 ರನ್‌ ಪೂರೈಸಿದ ಸಾಧನೆ ಮಾಡಿದರು. ಸಲ್ಮಾನ್‌ ಶತಕ: ಇದಕ್ಕೂ ಮುನ್ನ 5 ವಿಕೆಟ್‌ಗಳಿಗೆ 317ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿದ ಪಾಕಿಸ್ತಾನ 438 ರನ್‌ಗಳಿಗೆ ಆಲೌಟಾಯಿತು. ಆಘಾ ಸಲ್ಮಾನ್‌ (103 ರನ್‌, 155 ಎ.) ಶತಕ ಗಳಿಸಿದರು. ಬಾಬರ್ ಅಜಂ (161) ಅವರು ಹಿಂದಿನ ದಿನದ ಮೊತ್ತಕ್ಕೆ ಯಾವುದೇ ರನ್‌ ಸೇರಿಸದೆ ವಿಕೆಟ್ ಒಪ್ಪಿಸಿದರು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಪಾಕಿಸ್ತಾನ 130.5 ಓವರ್‌ಗಳಲ್ಲಿ 438 (ಬಾಬರ್‌ ಅಜಂ 161, ಆಘಾ ಸಲ್ಮಾನ್ 103, ಟಿಮ್ ಸೌಥಿ 69ಕ್ಕೆ 3, ಇಶ್‌ ಸೋಧಿ 87ಕ್ಕೆ 2) ನ್ಯೂಜಿಲೆಂಡ್‌ 47 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 165 (ಟಾಮ್‌ ಲಥಾಮ್‌ ಬ್ಯಾಟಿಂಗ್ 78, ಡೆವೊನ್‌ ಕಾನ್ವೆ ಬ್ಯಾಟಿಂಗ್‌ 82) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.