ರಣಜಿ ಟ್ರೋಫಿ ಕ್ರಿಕೆಟ್‌: ಗೋವಾ ನೆರವಿಗೆ ಸುಯಶ್‌, ಸಿದ್ದೇಶ್ ಪಣಜಿ: ಗೋವಾ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕಬೇಕೆಂಬ ಕರ್ನಾಟಕ ತಂಡದ ಕನಸಿಗೆ ಸುಯಶ್‌ ಪ್ರಭುದೇಸಾಯಿ ಮತ್ತು ದರ್ಶನ್‌ ಮಿಸಾಳ್‌ ಅಡ್ಡಿಯಾದರು. ಜಿಸಿಎಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದ ಮೂರನೇ ದಿನವಾದ ಗುರುವಾರದ ಆಟದ ಅಂತ್ಯಕ್ಕೆ ಗೋವಾ, 8 ವಿಕೆಟ್‌ಗಳಿಗೆ 321 ರನ್‌ ಕಲೆಹಾಕಿದೆ. ಆತಿಥೇಯ ತಂಡ ಇನ್ನೂ 282 ರನ್‌ಗಳಿಂದ ಹಿನ್ನಡೆಯಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ 603 ರನ್‌ ಗಳಿಸಿದ್ದ ಮಯಂಕ್‌ ಅಗರವಾಲ್‌ ಬಳಗ ಎದುರಾಳಿಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲವಾಯಿತು. ಸುಯಶ್ (87 ರನ್‌, 165 ಎ), ಸಿದ್ಧೇಶ್‌ ಲಾಡ್‌ (63 ರನ್‌, 84 ಎ) ಮತ್ತು ನಾಯಕ ದರ್ಶನ್‌ (ಬ್ಯಾಟಿಂಗ್‌ 66, 134 ಎ) ಅವರು ಅರ್ಧಶತಕದ ಮೂಲಕ ಕಾಡಿದರು. ಈ ಪಂದ್ಯವನ್ನು ಗೆದ್ದು ಪೂರ್ಣ ಅಂಕ ಗಳಿಸಬೇಕಾದರೆ ಕೊನೆಯ ದಿನವಾದ ಶುಕ್ರವಾರ ಕಠಿಣ ಪರಿಶ್ರಮ ನಡೆಸುವ ಸವಾಲು ಕರ್ನಾಟಕದ ಬೌಲರ್‌ಗಳ ಮುಂದಿದೆ. ಅಂತಿಮ ದಿನ ಯಾವುದೇ ಪವಾಡ ನಡೆಯದಿದ್ದರೆ, ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವ ಸಾಧ್ಯತೆಯೇ ಅಧಿಕ. ಆಫ್‌ಸ್ಪಿನ್ನರ್‌ ಕೆ.ಗೌತಮ್‌ (109ಕ್ಕೆ 3) ರಾಜ್ಯ ತಂಡದ ಪರ ಅತ್ಯಂತ ಯಶಸ್ವಿ ಬೌಲರ್‌ ಎನಿಸಿಕೊಂಡರೆ, ಶುಭಾಂಗ್‌ ಹೆಗ್ಡೆ ಮತ್ತು ವಿಜಯಕುಮಾರ್‌ ವೈಶಾಖ್‌ ತಲಾ ಎರಡು ವಿಕೆಟ್‌ ತಮ್ಮದಾಗಿಸಿಕೊಂಡರು. ಗೋವಾ ತಂಡ 1 ವಿಕೆಟ್‌ಗೆ 45 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿತ್ತು. ಸುಮೀರನ್ ಆಮೋಣಕರ್ (30 ರನ್‌) ವಿಕೆಟ್‌ ಪಡೆದ ಶುಭಾಂಗ್‌ ಹೆಗ್ಡೆ, ಕರ್ನಾಟಕಕ್ಕೆ ದಿನದ ಮೊದಲ ಯಶಸ್ಸು ತಂದಿತ್ತರು. ಆದರೆ ಸುಯಶ್‌ ಅವರು ಸ್ನೇಹಲ್‌ ಕೌತಣಕರ (21) ಅವರೊಂದಿಗೆ ಮೂರನೇ ವಿಕೆಟ್‌ಗೆ 64 ರನ್‌ಗಳ ಜತೆಯಾಟ ನೀಡಿದರು. ಸಿದ್ಧೇಶ್‌ ಮತ್ತು ದರ್ಶನ್‌ ನಡುವೆ ಆರನೇ ವಿಕೆಟ್‌ಗೆ 65 ರನ್‌ಗಳ ಜತೆಯಾಟ ಮೂಡಿಬಂತು. ಗೋವಾ ತಂಡ 270 ರನ್‌ಗಳಿಗೆ ಎಂಟು ವಿಕೆಟ್‌ ಕಳೆದುಕೊಂಡಿತು. ಆದರೆ ದರ್ಶನ್‌ ಅವರನ್ನು ಕೂಡಿಕೊಂಡ ಲಕ್ಷ್ಯ ಗರ್ಗ್‌, ಮೂರನೇ ದಿನದಾಟದಲ್ಲಿ ತಂಡ ಆಲೌಟ್‌ ಆಗುವುದನ್ನು ತಪ್ಪಿಸಿದರು. ಇವರಿಬ್ಬರು 9ನೇ ವಿಕೆಟ್‌ಗೆ ಈಗಾಗಲೇ 51 ರನ್‌ ಕಲೆಹಾಕಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.